ಬೆಂಗಳೂರು: ಮುಡಾ ಹಗರಣದಲ್ಲಿ ರಾಜ್ಯಪಾಲ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಕಾನೂನು ತಜ್ಞ ಪೊನ್ನಣ್ಣ, ಗುಪ್ತಚರ ಇಲಾಖೆ ಮುಖ್ಯಸ್ಥ ಶರತ್ ಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಸಚಿವರ ಜತೆ ತೀವ್ರ ಸಮಾಲೋಚನೆ ನಡೆಸಿರುವುದಾಗಿ ವರದಿ ತಿಳಿಸಿದೆ.
ವಿಶೇಷ ಸಚಿವ ಸಂಪುಟ ಸಭೆ ರದ್ದು?
ಶನಿವಾರ (ಆ.17) ಸಂಜೆ 5ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದು, ಎಲ್ಲಾ ಸಚಿವರು ಹಾಜರಾಗುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ ದಿಢೀರ್ ಆಗಿ ವಿಶೇಷ ಸಚಿವ ಸಂಪುಟ ಸಭೆಯನ್ನು ರದ್ದುಪಡಿಸಲಾಗಿದೆ ಎನ್ನಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲ ಗೆಹ್ಲೋಟ್ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಪ್ರಾರಂಭವಾಗಲಿದೆ. ಇದರಿಂದ ಸಿಎಂ ಸಿದ್ದರಾಮಯ್ಯನವರು ತನಿಖೆ ಅಥವಾ ಕೋರ್ಟ್ ವಿಚಾರಣೆ ಎದುರಿಸಬೇಕಾಗುತ್ತದೆ.
ದೂರುದಾರರಾದ ಟಿಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಅನುಮತಿ ಬಗ್ಗೆ ಉಲ್ಲೇಖಿಸಿತ್ತು. ಹೀಗಾಗಿ ವಿಶೇಷ ಕೋರ್ಟ್ ಮುಂದೆ ಮೂರು ಸಾಧ್ಯತೆಗಳಿವೆ.
1)ಮೇಲ್ನೋಟಕ್ಕೆ ಆರೋಪ ಕಂಡುಬಂದರೆ ತನಿಖೆಗೆ ಆದೇಶಿಸಬಹುದು.
2)ಕೋರ್ಟ್ ನ ವಿವೇಚನೆಯಂತೆ ಸಿಎಂ ಸಿದ್ದರಾಮಯ್ಯನವರಿಗೆ ಸಮನ್ಸ್ ಜಾರಿಗೊಳಿಸಬಹುದು
3)ಮೇಲ್ನೋಟಕ್ಕೆ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ಕಂಡುಬಂದಲ್ಲಿ ಖಾಸಗಿ ದೂರನ್ನು ವಜಾಗೊಳಿಸಬಹುದು.
ಹೈಕೋರ್ಟ್ ಮೆಟ್ಟಿಲೇರಲು ಸಿಎಂ ಸಿದ್ದರಾಮಯ್ಯ ಸಿದ್ಧತೆ:
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಗವರ್ನರ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಗವರ್ನರ್ ಪ್ರಾಸಿಕ್ಯೂಷನ್ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯನವರ ಕಾನೂನು ತಜ್ಞರ ತಂಡ ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಹೈಕೋರ್ಟ್ ನಲ್ಲಿ ಕೇವಿಯೆಟ್ ಅರ್ಜಿ ಸಲ್ಲಿಸಲಿರುವ ದೂರುದಾರ:
ಸಿಎಂ ಸಿದ್ದರಾಮಯ್ಯ ಅವರು ಗವರ್ನರ್ ಅವರ ಪ್ರಾಸಿಕ್ಯೂಷನ್ ಅನುಮತಿಗೆ ತಡೆಯಾಜ್ಞೆ ತರಬಾರದು ಎಂಬ ನಿಟ್ಟಿನಲ್ಲಿ ದೂರುದಾರ ಪ್ರದೀಪ್ ಹೈಕೋರ್ಟ್ ನಲ್ಲಿ ಕೇವಿಯೆಟ್ ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ:
ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಸೋಮವಾರ ಕೋರ್ಟ್ ಗೆ ಆದೇಶದ ಪ್ರತಿಯನ್ನು ಸಲ್ಲಿಸಲಿದ್ದೇವೆ. ಏತನ್ಮಧ್ಯೆ ಸಿದ್ದರಾಮಯ್ಯನವರು ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದೂರುದಾರ ಪ್ರದೀಪ್ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಮುಖಂಡ, ಸಂಸದ ಜಗದೀಶ್ ಶೆಟ್ಟರ್ ಕೂಡಾ ಸಿದ್ದರಾಮಯ್ಯನವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇವೆಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬೆನ್ನಿಗೆ ನಿಂತಿದ್ದರೂ ಕೂಡಾ ಸಿದ್ದರಾಮಯ್ಯನವರ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.