Advertisement
ರಾಜ್ಯಪಾಲರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 19(ಎ) ಪ್ರಕಾರ ಅನುಮತಿ ನೀಡಿದ್ದರೆ ನೇರವಾಗಿ ಇದನ್ನು ಪ್ರಶ್ನಿಸುವುದಕ್ಕೆ ಅವಕಾಶವಿರುತ್ತಿತ್ತು. ಆದರೆ 17(ಎ) ಪ್ರಕಾರ ನೀಡಿರುವುದರಿಂದ ದೂರುದಾರ ಅಭಿಯೋಜನಾ ಅನುಮತಿ ಪತ್ರದೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಗೆ ಅನುಮತಿ ಕೋರಬಹುದು. ಆಗ ನ್ಯಾಯಾಲಯ ಖಾಸಗಿ ದೂರು ದಾಖಲಿಸಿಕೊಂಡು ಸೆಕ್ಷನ್ 202 ಅಡಿಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿ ವರದಿ ಕೊಡಿ ಎಂದು ಲೋಕಾಯುಕ್ತ ಅಥವಾ ಪೊಲೀಸ್‌ಗೆ ಸೂಚನೆ ನೀಡಬಹುದು. ಹೀಗಾಗಿ ವಿಚಾರಣೆ ಅನಿವಾರ್ಯವಾಗಿ ಪರಿಣಮಿಸುತ್ತದೆ.
Related Articles
—
“ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆ ಕೋರಿ ದೂರು ಬಂದಾಗ ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸುವುದಕ್ಕೆ ಅವಕಾಶವಿದೆ. ಅದಕ್ಕಾಗಿ ಅವರು ಸಂಪುಟದ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದೇನೂ ಇಲ್ಲ. ಆದರೆ ರಾಜ್ಯಪಾಲರ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೂ ಅವಕಾಶವಿದೆ. ರಾಜ್ಯಪಾಲರ ನಡೆ ಹೇಗೆ ಕಾನೂನು ರೀತಿ ಇಲ್ಲ ಎಂದು ಮನವರಿಕೆ ಮಾಡಿಕೊಡುವುದಕ್ಕೆ ಹಾಗೂ ಕಾನೂನು ಹೋರಾಟ ಮಾಡುವುದಕ್ಕೆ ಅವಕಾಶವಿದೆ.”
– ಅಶೋಕ ಹಾರ್ನಳ್ಳಿ, ನಿವೃತ್ತ ಅಡ್ವೋಕೇಟ್ ಜನರಲ್
—
“ನನ್ನ ಕಾನೂನು ಅರಿವಿನ ಪ್ರಕಾರ 17(ಎ) ಪ್ರಕಾರ ರಾಜ್ಯಪಾಲರು ಅಭಿಯೋಜನೆ ನಡೆಸುವುದಕ್ಕೆ ಅನುಮತಿ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದೇ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಬೇಕು ಎಂದು ಕಾನೂನು ಹೇಳುವುದಿಲ್ಲ. ರಾಜೀನಾಮೆ ನೈತಿಕತೆಗೆ ಸಂಬಂಧಪಟ್ಟ ವಿಚಾರ. ಆದರೆ ಅಭಿಯೋಜನೆ ಪತ್ರವನ್ನು ಮುಂದಿಟ್ಟುಕೊಂಡು ಸಲ್ಲಿಕೆಯಾಗುವ ಖಾಸಗಿ ದೂರನ್ನು ನ್ಯಾಯಾಲಯ ಎತ್ತಿ ಹಿಡಿದಾಗ ಸಮಸ್ಯೆಯಾಗಬಹುದು. ಇದರ ಜತೆಗೆ ಈ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಕ್ಕೂ ಅವರಿಗೆ ಅಧಿಕಾರವಿದೆ.” – ಸಿ.ಎಚ್. ಹನುಮಂತರಾಯ, ಹಿರಿಯ ನ್ಯಾಯವಾದಿ
—
Advertisement
“ಈ ಪ್ರಕರಣದಲ್ಲಿ ಏನಾಗಬಹುದು ಎಂದು ಇದಮಿತ್ಥಂ ಎನ್ನಲು ಸಾಧ್ಯವಿಲ್ಲ. ಕಾನೂನು ಹೋರಾಟ ಎಂದಾಗ ಹತ್ತು ಹಲವು ಸಾಧ್ಯತೆಗಳು ಇರುತ್ತವೆ. ಸದ್ಯಕ್ಕೆ ಸಿದ್ದರಾಮಯ್ಯನವರ ಮುಂದೆ ಇರುವ ಅವಕಾಶಗಳ ಪೈಕಿ ರಾಜ್ಯಪಾಲರ ನಿರ್ಣಯವನ್ನು ಪ್ರಶ್ನಿಸುವುದಾಗಿರಬಹುದು. ಇದಕ್ಕೆ ಅವಕಾಶವಿದೆ.” – ಉದಯ ಹೊಳ್ಳ, ರಾಜ್ಯ ಸರಕಾರದ ನಿವೃತ್ತ ಅಡ್ವೊಕೇಟ್ ಜನರಲ್