ಬೆಂಗಳೂರು: “ಮೈಸೂರಿನ ಮುಡಾದ ನಿವೇಶನ ಹಂಚಿಕೆ ಪ್ರಕರಣದ ಬಗ್ಗೆ ತನಿಖೆ ಬೇಡವೆಂದರೆ ಇನ್ನು ಯಾವ ಪ್ರಕರಣದ ಬಗ್ಗೆ ತನಿಖೆ ನಡೆಸಬಹುದು ಎಂಬುದು ನನಗೆ ಅರ್ಥವಾಗುವುದಿಲ್ಲ. ಈ ಪ್ರಕರಣದ ಫಲಾನುಭವಿಗಳು ಅಪರಿಚಿತರಲ್ಲ, ಮುಖ್ಯಮಂತ್ರಿಗಳ ಕುಟುಂಬವೇ ಲಾಭ ಪಡೆದಿದೆ’. ಇದು ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ತೀರ್ಪಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ವ್ಯಕ್ತಪಡಿಸಿರುವ ಅಭಿಪ್ರಾಯ.
ಮುಡಾದ ನಿಯಮಗಳ ಪ್ರಕಾರ 3 ಎಕರೆಗಿಂತ ಹೆಚ್ಚು ಜಮೀನು ಕಳೆದುಕೊಂಡ ವ್ಯಕ್ತಿ 4,800 ಚದರಡಿ ವಿಸ್ತೀರ್ಣದ 40×60ರ 2 ನಿವೇಶನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಈ ಪ್ರಕರಣದಲ್ಲಿ ದೂರುದಾರರಿಗೆ (ಮುಖ್ಯಮಂತ್ರಿ ಸಿದ್ದರಾಮಯ್ಯ) 38,284 ಚದರಡಿ ನೀಡಲಾಗಿದೆ. 2 ನಿವೇಶನಗಳು 14 ಆಗಿವೆ.
ದೂರುದಾರರಿಗೆ 4,800 ಚದರಡಿ ವಿಸ್ತೀರ್ಣದ ಜಮೀನು ಪಡೆಯಲು ಅರ್ಹತೆ ಇದ್ದವರಿಗೆ ಎಷ್ಟೊಂದು ನೀಡಲಾಗಿದೆ ಎಂಬುದು ನ್ಯಾಯಾಲಯದ ಪ್ರಜ್ಞೆಗೆ ಆಘಾತಕಾರಿಯಾಗಿದೆ. ದೂರುದಾರರ ಪತ್ನಿ 56 ಕೋಟಿ ರೂ. ಮೌಲ್ಯದ 14 ನಿವೇಶನಗಳ ಹೆಮ್ಮೆಯ ಮಾಲಕಿ ಆಗಿದ್ದಾರೆ ಎಂದು ನ್ಯಾ. ನಾಗಪ್ರಸನ್ನ ತನ್ನ ತೀರ್ಪಿನಲ್ಲಿ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಿಸಿರುವ ನ್ಯಾಯಮೂರ್ತಿಗಳು ಪ್ರಕರಣದಲ್ಲಿ ತನಿಖೆ ಅಗತ್ಯವಿದೆ ಎಂಬುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
“ಯತೀಂದ್ರ ಮೌನ’ ವಾದ ಹಾಸ್ಯಾಸ್ಪದ: ಹೈಕೋರ್ಟ್
ಮೈಸೂರಿನ ಮುಡಾದ ನಿವೇಶನ ಹಂಚಿಕೆ ಸಂಬಂಧ ನಡೆದಿದ್ದ ಸಭೆಯಲ್ಲಿ ಡಾ| ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದರೂ ಮೌನವಾಗಿದ್ದರು ಎಂಬ ಅರ್ಜಿ ದಾರರವಾದ ಹಾಸ್ಯಾಸ್ಪದ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಿಎಂ ವಿರುದ್ಧ ರಾಜ್ಯಪಾಲರು ಆಭಿಯೋಜನೆಗೆ ಅನುಮತಿ ನೀಡಿರುವ ತೀರ್ಪಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪತ್ನಿ 50:50 ಅನುಪಾತದಲ್ಲಿ ಪರಿಹಾರ ಅಥವಾ ಪರಿಹಾರ ನಿವೇಶನ ನೀಡುವಂತೆ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮಾದರಿಯಲ್ಲಿ ಪರಿಹಾರ ಪ್ರಕಟಿಸುವಾಗಲೂ ನಿಯಮಗಳ ಉಲ್ಲಂಘನೆಯಾಗಿದೆ. 50:50 ಅನುಪಾತದಲ್ಲಿ ಪರಿಹಾರ ನೀಡುವ ಬಗ್ಗೆ ನಡೆದ ಮುಡಾ ಸಭೆಯಲ್ಲಿ ದೂರುದಾರರ ಮಗ (ಡಾ|ಯತೀಂದ್ರ) ಭಾಗಿಯಾಗಿದ್ದರು. ಆದರೆ ಸಭೆಯಲ್ಲಿ ಅವರು ಮೌನವಾಗಿದ್ದರು ಎಂದು ದೂರುದಾರರ ಪರ ವಾದ ಮಂಡನೆ ಮಾಡಲಾಗಿದೆ. ಈ ವಾದ ಹಾಸ್ಯಾಸ್ಪದ.
ಒಬ್ಬ ಕಾನೂನು ನಿರ್ಮಾತೃ, ಮಾಜಿ ಮುಖ್ಯಮಂತ್ರಿಯ ಮಗ ಮತ್ತು ಆಗಿನ ವಿಪಕ್ಷದ ನಾಯಕನ ಮಗ ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಮೌನವಾಗಿದ್ದರು ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಫಲಾನುಭವಿ ಅವರ ತಾಯಿಯಾಗಿದ್ದರು ಎಂದು ನ್ಯಾಯಾಲಯ ಹೇಳಿದೆ.