Advertisement

MUDA Scam: ಸಿಎಂ ಸಿದ್ದರಾಮಯ್ಯ ತನಿಖೆಗೆ ರಾಜ್ಯಪಾಲ ಅಸ್ತು?

12:09 AM Aug 01, 2024 | Team Udayavani |

ಬೆಂಗಳೂರು: ವಿವಾದಿತ ಮುಡಾ ಹಗರಣವು ಸಿಎಂ ಸಿದ್ದರಾಮಯ್ಯಗೆ ಉರುಳಾಗುವ ಎಲ್ಲಸಾಧ್ಯತೆಗಳೂ ದಟ್ಟವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು 2ನೇ ಬಾರಿಗೆ ನೋಟಿಸ್‌ ಜಾರಿ ಗೊಳಿಸಿದ್ದಾರೆ. ರಾಜ್ಯಪಾಲರ ನಡೆಯ ವಿರುದ್ಧ ಸರಕಾರ ಅಸಮಾಧಾನ ಗೊಂಡಿದ್ದು, ಇದಕ್ಕೆ ತದ್ವಿರುದ್ಧ ವಾಗಿ ಗುರುವಾರದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಂಭವವಿದೆ.

Advertisement

ಮುಡಾವು ಸಿಎಂ ಪತ್ನಿ ಪಾರ್ವತಿ ಹೆಸರಿಗೆ ಪರಿಹಾರ ವೆಂಬಂತೆ ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ ಗಳಲ್ಲಿ ಹಂಚಿಕೆ ಮಾಡಿರುವ 14 ನಿವೇಶನಗಳ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರಿಗೆ ದೂರು ನೀಡಿದ್ದರಲ್ಲದೆ, ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕೆಂದೂ ಕೋರಿದ್ದರು.

ಈ ಸಂಬಂಧ ಸ್ಪಷ್ಟನೆ ನೀಡುವಂತೆ ಅಧಿವೇಶನದ ಸಂದರ್ಭದಲ್ಲಿ ಅಂದಿನ ಮುಖ್ಯಕಾರ್ಯದರ್ಶಿಗೆ ರಾಜ್ಯಪಾಲರು ನೋಟಿಸ್‌ ಕೊಟ್ಟಿದ್ದರು. ಖುದ್ದು ರಾಜ್ಯಪಾಲರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಮತ್ತು ಮುಡಾ ನಿವೇಶನ ಹಂಚಿಕೆ ಕುರಿತು ದಾಖಲೆ ಸಮೇತ ಸ್ಪಷ್ಟನೆಗಳನ್ನು ಕೊಟ್ಟಿದ್ದರು.

ಆದರೂ ಸಮಾಧಾನಗೊಳ್ಳದ ರಾಜ್ಯಪಾಲರು ಹೆಚ್ಚುವರಿ ಸ್ಪಷ್ಟನೆ ಹಾಗೂ ದಾಖಲೆಗಳನ್ನು ಒದಗಿಸುವಂತೆ ಮತ್ತೂಂದು ನೋಟಿಸ್‌ ಜಾರಿ ಮಾಡಿದ್ದಾರೆ. ಜತೆಗೆ ದೂರುದಾರ ಟಿ.ಜೆ. ಅಬ್ರಹಾಂಗೂ ಸೂಚನಾಪತ್ರ ನೀಡಲಾಗಿದೆ. ಜಮೀನಿನ ಮೂಲ ಮಾಲಕರು, ಮಾಲಕತ್ವ ವರ್ಗಾವಣೆಯಾದ ಕುರಿತು ಹೆಚ್ಚುವರಿ ಸ್ಪಷ್ಟನೆ ಮತ್ತು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಗುರುವಾರ ದಾಖಲೆಗಳನ್ನು ಒದಗಿಸುವುದಾಗಿ ಅಬ್ರಹಾಂ ಹೇಳಿದ್ದಾರೆ.

ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ. ಅಷ್ಟೇ ಅಲ್ಲದೆ ರಾಜ್ಯಪಾಲರನ್ನು ಕುರಿತು ಸಂಪುಟ ಸಭೆಯಲ್ಲಿ ನಿರ್ಣಯವೊಂದನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

Advertisement

ದಿಲ್ಲಿಯಲ್ಲೇ ಬೀಡುಬಿಟ್ಟ ರಾಜ್ಯಪಾಲರು
ಕಳೆದ 2 ದಿನಗಳಿಂದ ದಿಲ್ಲಿಯಲ್ಲೇ ಬೀಡುಬಿಟ್ಟಿರುವ ರಾಜ್ಯಪಾಲರು ಸುಪ್ರೀಂ ಕೋರ್ಟ್‌ನ ಕೆಲ ಹಿರಿಯ ವಕೀಲರು ಹಾಗೂ ಕಾನೂನುತಜ್ಞರ ಅಭಿಪ್ರಾಯ ಪಡೆದುಕೊಂಡಿದ್ದು, ಕಾನೂನಾತ್ಮಕವಾಗಿ ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕೆಂಬ ವಿಸ್ತೃತ ಚರ್ಚೆ ನಡೆಸಿದ್ದಾರೆ.

ಅಧಿಕಾರಿಗಳಿಂದ ಸಿಎಂಗೆ ವಿವರಣೆ
ಮಂಗಳವಾರವೇ ದಿಲ್ಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ, ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿದಂತೆ ಇನ್ನಿತರರನ್ನು ಭೇಟಿ ಮಾಡಿದ್ದರು. ಅಲ್ಲದೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಕೇಂದ್ರದ ಇನ್ನಿತರ ಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಿದರು.

ಸಂಪುಟ ಸಭೆಯಲ್ಲಿ ನಿರ್ಣಯ !
ತಮ್ಮ ವಿರುದ್ಧ ಆರೋಪ ಇರುವುದರಿಂದ ಸಚಿವ ಸಂಪುಟಸಭೆಯಲ್ಲಿ ಭಾಗಿಯಾಗದಿರಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆನ್ನಲಾಗಿದೆ. ಹೀಗಾಗಿ ಡಿಸಿಎಂ ಡಿಕೆಶಿ ಅಥವಾ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು ಸಂಪುಟ ಸಭೆಯ ಅಧ್ಯಕ್ಷತೆ ವಹಿಸುವ ಸಾಧ್ಯತೆಗಳಿವೆ.

ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಿರುವುದೇಕೆ?
ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್‌ 464ರಲ್ಲಿದ್ದ 3.16 ಎಕರೆ ಜಾಗವನ್ನು 5 ಲಕ್ಷ ರೂ. ಕೊಟ್ಟು ಸಿಎಂ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಖರೀದಿಸಿದಂತೆ ದಾಖಲೆಗಳನ್ನು ಸೃಷ್ಟಿಸಿದ್ದು, ಈ ಬಗ್ಗೆ ಭೂಮಿಯ ಮೂಲ ಮಾಲಕರಿಗೇ ಮಾಹಿತಿ ಇಲ್ಲ. ಸಾಲದ್ದಕ್ಕೆ ಅದನ್ನು ಸಿಎಂ ಪತ್ನಿ ಪಾರ್ವತಿ ಅವರ ಹೆಸರಿಗೆ ಉಡುಗೊರೆಯಾಗಿ ಖಾತೆ ಮಾಡಲಾಗಿತ್ತು. ಅದೇ ಜಾಗದಲ್ಲಿ ಮುಡಾ ಬಡಾವಣೆ ರಚಿಸಿದ್ದು, ಪರಿಹಾರ ಕೊಡುವುದಾಗಿ ಹೇಳಿದ್ದರೂ ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿವೇಶನಗಳನ್ನೇ ಪರಿಹಾರದ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಅಧಿಕಾರ ದುರುಪಯೋಗ ಆಗಿದೆ ಎಂಬಿತ್ಯಾದಿ ದೂರುಗಳನ್ನು ಕೊಟ್ಟಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಲಾಗಿದೆ.

ಏನಿದು ಪ್ರಕರಣ?
-ಸಿಎಂ ವಿರುದ್ಧ ವಿಚಾರಣೆಗೆ ಕೋರಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ
-ಸಿಎಸ್‌ಗೆ ನೋಟಿಸ್‌ ಕೊಟ್ಟಿದ್ದ ರಾಜ್ಯಪಾಲರು; ಖುದ್ದು ಮುಖ್ಯಮಂತ್ರಿಯಿಂದಲೇ ವಿವರಣೆ
-ಸಿಎಂ ಅನುಪಸ್ಥಿತಿಯಲ್ಲಿ, ರಾಜ್ಯಪಾಲರ ಆದೇಶದ ವಿರುದ್ಧ ಇಂದು ಸಂಪುಟ ಸಭೆಯಲ್ಲಿ ನಿರ್ಣಯ?

ನಿನ್ನೆ ತಡರಾತ್ರಿ
ಸಿಎಂ ಸಭೆ
ರಾಜ್ಯ ಪಾಲರು ನೋಟಿಸ್‌ ನೀಡಿರು ವುದರಿಂದ, ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಸುರ್ಜೇವಾಲಾ, ವೇಣು ಭೇಟಿ
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ಸುರ್ಜೇವಾಲಾ ಆ. 4 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next