ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿನ ನಿವೇಶನ ಹಂಚಿಕೆ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತದಿಂದ ತನಿಖೆ ಮತ್ತಷ್ಟು ಬಿರುಸುಗೊಂಡಿದ್ದು, ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಪಾಲಯ್ಯ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿಯವರ ಕಡತಕ್ಕೆ ಸಂಬಂಧಿಸಿದಂತೆ ಹಿಂದೆ ಇದ್ದ ಎಲ್ಲ ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ನಿವೃತ್ತ ಐಎಎಸ್ ಅಧಿಕಾರಿ ಎಸ್. ಪಾಲಯ್ಯ ಅವರು ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.
ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಮತ್ತು ತಂಡ, ಮೈಸೂರಿನಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪಾಲಯ್ಯ ಅವರಿಗೂ ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಮೊದಲ ಬಾರಿ ನೀಡಿದ ವೇಳೆ ಬಾರದ ಹಿನ್ನೆಲೆಯಲ್ಲಿ ಮತ್ತೆ ನೋಟಿಸ್ ನೀಡಲಾಗಿತ್ತು. ಗುರುವಾರ ಬೆಳಗ್ಗೆ 11.15ರ ವೇಳೆಗೆ ಕಚೇರಿಗೆ ಆಗಮಿಸಿದ ಪಾಲಯ್ಯ ಅವರನ್ನು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು.
ಇದರ ಜತೆಗೆ ಲೋಕಾಯುಕ್ತ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಹಾಗೂ ಹಿರಿಯ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ರಾವ್ ಅವರನ್ನೂ ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದ್ದಾರೆ. ಅಂದು ಬಚ್ಚೇಗೌಡ ನಗರಾಭಿವೃದ್ಧಿ ಸಚಿವರಾಗಿದ್ದರೆ, ಸುಬ್ರಹ್ಮಣ್ಯರಾವ್ ಕೆಸರೆ ಭೂಮಿ ಸರ್ವೆ ನಂ. 464ರ ವಿವಾದದ ವೇಳೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದರು.