Advertisement

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

12:58 AM Nov 15, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮರಿಗೌಡ, ಮಾಜಿ ಕಾರ್ಯದರ್ಶಿ ಮಾಳಿಗೆ ಶಂಕರ್‌ ಹಾಗೂ ಮೈಸೂರಿನ ಶಿವಣ್ಣ ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಹಾಜರಾಗಿದ್ದು, ಮೂವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ.

Advertisement

ಬೆಂಗಳೂರಿನ ಶಾಂತಿನಗರದ ಟಿಟಿಎಂಸಿ ಬಸ್‌ ನಿಲ್ದಾಣದ ಕಟ್ಟಡದಲ್ಲಿರುವ ಜಾರಿ ನಿರ್ದೇಶನಾಲಯಕ್ಕೆ ಬೆಳಗ್ಗೆ 11ರ ಸುಮಾರಿಗೆ ಬಂದ ಮೂವರನ್ನು ಇ.ಡಿ. ಅಧಿಕಾರಿಗಳು ರಾತ್ರಿ 9.30ರ ವರೆಗೂ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಶಿವಣ್ಣ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು.

ಮುಡಾ ಹಗರಣದ ತನಿಖೆ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಮರಿಗೌಡ ಮುಡಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಆಪ್ತರಾಗಿರುವ ಕಾರಣ ಮುಡಾ ಹಗರಣದಲ್ಲಿ ಮರಿಗೌಡ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲಾಯಿತು. ಈ ಹಿಂದೆಯೇ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಅಧಿಕಾರಿಗಳು ನೋಟಿಸ್‌ ನೀಡಿದ್ದರೂ ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಗೈರಾಗಿದ್ದರು. ಇದೀಗ ವಿಚಾರಣೆಗೆ ಹಾಜರಾಗಿ ಇ.ಡಿ. ಅಧಿಕಾರಿಗಳು ಕೇಳಿರುವ ಮಾಹಿತಿಗಳಿಗೆ ಉತ್ತರ ನೀಡಿ¨ªಾರೆ ಎಂದು ಮೂಲಗಳು ತಿಳಿಸಿವೆ.

9 ಗಂಟೆಗಳ ಕಾಲ ವಿಚಾರಣೆ
ಈ ವೇಳೆ ಮುಡಾ ಹಗರಣದಲ್ಲಿ ತಮ್ಮ ಪಾತ್ರ ಮತ್ತು ಸಿದ್ದರಾಮಯ್ಯ ಪಾತ್ರ ಏನು? ಮುಡಾದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ರಾಜಕೀಯವಾಗಿ ಯಾರಾದರೂ ಪ್ರಭಾವ ಬೀರಿದ್ದಾರೆಯೇ? ಯಾವ ಮಾನದಂಡಗಳ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು? 50-50 ಅನುಪಾತದಲ್ಲಿ ನಿವೇಶನ ಹಂಚಿಕೆ ಸೂತ್ರ ಅನುಸರಿಲಾಗಿದೆಯೇ? ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಯಾವ ಆಧಾರದ ಮೇಲೆ ಹೆಚ್ಚುವರಿ ನಿವೇಶನ ನೀಡಲಾಗಿದೆ ಎಂಬ ಪ್ರಶ್ನೆಗಳೂ ಸೇರಿದಂತೆ ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಇನ್ನು ಮಾಜಿ ತಹಶೀಲ್ದಾರ್‌ ಹಾಗೂ ಮುಡಾ ಮಾಜಿ ಕಾರ್ಯದರ್ಶಿ ಮಾಳಿಗೆ ಶಂಕರ್‌ ಅವರನ್ನು 9.5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಮುಡಾ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಶಂಕರ್‌, ಮುಡಾ ಕಾರ್ಯದರ್ಶಿಯಾಗಿದ್ದರು. ಹೀಗಾಗಿ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿವಣ್ಣಗೆ ಎದೆನೋವು; ಆಸ್ಪತ್ರೆಗೆ ದಾಖಲು
ಮತ್ತೂಂದೆಡೆ ಬಿಲ್ಡರ್‌ ಮಂಜುನಾಥ್‌ ಆಪ್ತ ಸಹಾಯಕನಿಗೆ ಕಾರಿನಲ್ಲಿ ಮೈಸೂರಿನ ಶಿವಣ್ಣ ಅ‌ವರು 25 ಲಕ್ಷ ರೂ. ನಗದು ಕೊಟ್ಟಿದ್ದರು. ಈ ಸಂಬಂಧ ಹಣ ಎಣಿಸುತ್ತಿರುವ 1.38 ನಿಮಿಷದ ದೃಶ್ಯ ವೀಡಿಯೋ ಸಮೇತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ 25 ಲಕ್ಷ ರೂ. ಮೂಲ ಯಾವುದು? ಯಾವ ಕಾರಣಕ್ಕೆ ಮಂಜುನಾಥ್‌ ಆಪ್ತನಿಗೆ ಹಣ ನೀಡಲಾಗಿದೆ ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಸಂಜೆ 7 ಗಂಟೆ ಸುಮಾರಿಗೆ ವಿಚಾರಣೆ ಸಂದರ್ಭದಲ್ಲೇ ಶಿವಣ್ಣನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಏನೇನಾಯ್ತು?
ಬೆಂಗಳೂರಿನ ಇ.ಡಿ. ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭ
ಮಾಜಿ ಕಾರ್ಯದರ್ಶಿ ಮಾಳಿಗೆ ಶಂಕರ್‌, ಮೈಸೂರಿನ ಶಿವಣ್ಣರಿಗೂ ಪ್ರಶ್ನೆಗಳ ಸುರಿಮಳೆ
ಮೂವರನ್ನೂ ರಾತ್ರಿ 9.30ರ ವರೆಗೂ ವಿಚಾರಣೆಗೊಳಪಡಿಸಿದ ಅಧಿಕಾರಿಗಳು
 ಮುಡಾ ಹಗರಣದಲ್ಲಿ ತಮ್ಮ ಪಾತ್ರ ಮತ್ತು ಸಿದ್ದರಾಮಯ್ಯ ಪಾತ್ರದ ಬಗ್ಗೆ ಪ್ರಶ್ನೆ
ಮೈಸೂರು ಶಿವಣ್ಣಗೆ ಎದೆನೋವು, ಆಸ್ಪತ್ರೆಗೆ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next