ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಹಾಗೂ ರಾಜ್ಯ ಪಾಲರ ಮಧ್ಯೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕಾನೂನು ಸಮರ ಅಂತಿಮ ಹಂತಕ್ಕೆ ತಲುಪಿದ್ದು, ತೀರ್ಪು ಹೊರಬೀಳುವು ದಷ್ಟೇ ಬಾಕಿ ಇದೆ.
ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪೂರ್ಣಗೊಳಿಸಿದ್ದು ತೀರ್ಪನ್ನು ಕಾದಿರಿಸಿದೆ.
ತೀರ್ಪು ಪ್ರಕಟಗೊಳ್ಳುವವರೆಗೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರುಗಳಿಗೆ ಸಂಬಂಧಿಸಿದಂತೆ ಆದೇಶ ಅಥವಾ ವಿಚಾರಣೆ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಮತ್ತು ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವ ಆದೇಶ ಆಧರಿಸಿ ಸಿದ್ದರಾಮಯ್ಯನವರ ವಿರುದ್ಧ ಈ ಹಂತದಲ್ಲಿ ಯಾವುದೇ ಬಲವಂತದ ಅಥವಾ ಆತುರದ ಕ್ರಮ ಜರಗಿಸುವಂತಿಲ್ಲ ಎಂದು ಹೈಕೋರ್ಟ್ ಆಗಸ್ಟ್ 19ರಂದು ನೀಡಿರುವ ಮಧ್ಯಾಂತರ ಆದೇಶವನ್ನು ವಿಸ್ತರಿಸಿದೆ. ಆದ್ದರಿಂದ ಕೆಲವು ದಿನಗಳ ಮಟ್ಟಿಗೆ ಸಿದ್ದರಾಮಯ್ಯನವರಿಗೆ ನಿರಾಳತೆ ಸಿಕ್ಕಂತಾಗಿದೆ.
ಗುರುವಾರ ಮಧ್ಯಾಹ್ನ ವಿಚಾರಣೆ ಆರಂಭಗೊಂಡಾಗ ಸಿಎಂ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂ Ì ಸುದೀರ್ಘ ವಾದ ಮಂಡಿಸಿ ರಾಜ್ಯಪಾಲರ ಕ್ರಮವನ್ನು ಬಲವಾಗಿ ಆಕ್ಷೇಪಿಸಿದರು. ಮತ್ತೋರ್ವ ಹಿರಿಯ ವಕೀಲ ಪ್ರೊ| ರವಿವರ್ಮ ಕುಮಾರ್, ವಿವಾದಿತ ಜಮೀನು, ಮುಡಾ ಸಭೆಗಳ ಕುರಿತು ವಿವರಗಳನ್ನು ಮಂಡಿಸಿದರು.ದೂರುದಾರ ಟಿ.ಜೆ. ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ, ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ ತಮ್ಮ ಅಂತಿಮ ವಾದಗಳನ್ನು ಪೂರ್ಣಗೊಳಿಸಿದರು.
6 ದಿನ ವಿಚಾರಣೆ: 9 ವಕೀಲರಿಂದ
18 ಗಂಟೆಗಳ ವಾದ ಮಂಡನೆ
ಆಗಸ್ಟ್ 19ರಂದು ಮೊದಲ ಬಾರಿಗೆ ಅರ್ಜಿಯ ವಿಚಾರಣೆ ನಡೆದಿತ್ತು. ಅಂತಿಮ ವಿಚಾರಣೆ ಸೆ. 12ರಂದು ನಡೆಯಿತು. ಒಟ್ಟು 6 ದಿನ ನಡೆದ ವಿಚಾರಣೆಯಲ್ಲಿ ಸಿಎಂ, ರಾಜ್ಯಪಾಲರು ಹಾಗೂ ದೂರುದಾರರ ಪರ ಸೇರಿ ಒಟ್ಟು 9 ಮಂದಿ ವಕೀಲರು 18 ಗಂಟೆಗೂ ಹೆಚ್ಚು ಕಾಲ ವಾದಗಳನ್ನು ಮಂಡಿಸಿದ್ದಾರೆ.
ಸಿಎಂ ಪರ ವಾದ
-ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ತರ್ಕರಹಿತ
-ಸಿಎಂ ಸಿದ್ದರಾಮಯ್ಯ ಪಾತ್ರವೇನು ಎಂದು ರಾಜ್ಯಪಾಲರು ಹೇಳಿಲ್ಲ
-ತನಿಖಾಧಿಕಾರಿ ಮನವಿ ಯಿಲ್ಲದೇ ಅಭಿಯೋಜನೆಗೆ ಆದೇಶ ನೀಡಲು ಅಸಾಧ್ಯ
ಸಿಎಂ ವಿರುದ್ಧ ವಾದ
-ಮುಡಾ ಹಂಚಿಕೆಯ ಬೆಳವಣಿಗೆ ಸಿದ್ದು ಅಧಿಕಾರದಲ್ಲಿದ್ದಾಗಲೇ ಆಗಿದ್ದು
-1996ರಿಂದ 99ರ ವರೆಗೆ ಸಿದ್ದರಾಮಯ್ಯ ರಾಜ್ಯದ ಡಿಸಿಎಂ ಆಗಿದ್ದರು
-ವಿವಾದಿತ ಜಮೀನು 1997ರಲ್ಲಿ ಭೂ ಸ್ವಾಧೀನ, 1998ರಲ್ಲಿ ಡಿನೋಟಿಫೈ