ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣದ (Muda Case) ತನಿಖೆಯನ್ನು ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು ಪ್ರಕರಣದ ಎ1 ಆರೋಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರಿಗೆ ಶೀಘ್ರದಲ್ಲೇ ನೋಟಿಸ್ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಈಗಾಗಲೇ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಕ್ತಾಯಗೊಳಿಸಿದ್ದಾರೆ. ಹಾಗಾಗಿ 1ನೇ ಆರೋಪಿ ಸಿದ್ದರಾಮಯ್ಯ ಅವರನ್ನು ಯಾವಾಗ ವಿಚಾರಣೆಗೆ ಒಳಪಡಿಸುತ್ತಾರೆಂಬ ಪ್ರಶ್ನೆ ಇದೆ.
ಶುಕ್ರವಾರವಷ್ಟೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿಚಾರಣೆ ನಡೆಸಿರುವ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ದೀಪಾವಳಿ ಬಳಿಕ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣ ಸಂಬಂಧ 2ನೇ ಆರೋಪಿ ಬಿ.ಎಂ. ಪಾರ್ವತಿ, 3ನೇ ಆರೋಪಿ ಮಲ್ಲಿಕಾರ್ಜುನಸ್ವಾಮಿ, 4ನೇ ಆರೋಪಿ ದೇವರಾಜು ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ, ರಾಯಚೂರು ಸಂಸದ ಕುಮಾರ ನಾಯ್ಕ, ಮಾಜಿ ಸಚಿವ ಬಚ್ಚೇಗೌಡ, ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ರಾವ್ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತನಿಖಾಧಿಕಾರಿಯೂ ಆದ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್, ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡುವುದು, ಬಿಡುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರ. ನಾವು ನೋಟಿಸ್ ನೀಡಿದಾಗ ಆ ವಿಷಯ ಗೊತ್ತಾಗುತ್ತದೆ. ಎಲ್ಲಿ, ಯಾವಾಗ, ಹೇಗೆ ವಿಚಾರಣೆ ಮಾಡಬೇಕು ಎಂಬ ಅಂಶಗಳನ್ನು ಆ ಕ್ಷಣಕ್ಕೆ ನಾವು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಇರುವ ಸ್ಥಳಕ್ಕೆ ಹೋಗಿ ತನಿಖೆ ನಡೆಸಬೇಕೇ ಅಥವಾ ನಾವಿರುವ ಸ್ಥಳಕ್ಕೆ ಅವರನ್ನು ಕರೆಸಿಕೊಂಡು ತನಿಖೆ ನಡೆಸಬೇಕೇ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಈ ವಿಚಾರವನ್ನು ಮಾಧ್ಯಮಗಳಿಗೆ ಹೇಳುವಂತೆಯೂ ಇಲ್ಲ. ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಕಾಲ ಮಿತಿಯೊಳಗೆ ತನಿಖೆ ಮುಕ್ತಾಯಗೊಳಿಸುತ್ತೇವೆ. 30 ದಿನಗಳ ಒಳಗೆ ಬಹುತೇಕ ವಿಚಾರಣೆ ಮುಗಿಸಿದ್ದು, ಇನ್ನೂ 60 ದಿನಗಳ ಕಾಲಾವಕಾಶವಿದೆ. ಕಾಲಮಿತಿಯೊಳಗೆ ತನಿಖೆ ಮುಗಿಸುವ ಪ್ರಯತ್ನದಲ್ಲಿದ್ದೇವೆ ಎಂದರು.