Advertisement

MUDA Case: ಲೋಕಾಯುಕ್ತಕ್ಕೆ ಇಡಿ ಬರೆದಿರುವ ಪತ್ರ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

10:10 PM Dec 04, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಬರೆದಿರುವ ಪತ್ರ ರಾಜಕೀಯ ಪ್ರೇರಿತವಾಗಿದ್ದು ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರ ಉದ್ದೇಶಿಸಿ ಮಾತನಾಡಿ ಹೈಕೋರ್ಟ್ ನಲ್ಲಿ ನಮ್ಮ‌ ಅರ್ಜಿ ವಿಚಾರಣೆಗೆ ಬರುವ ಹಿಂದಿನ‌ ದಿನ ಇ.ಡಿ ಯವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ. ಇ.ಡಿ ಯವರು ತನಿಖೆ ನಡೆಸುತ್ತಿದ್ದಾರೆ. ಇವರು ತನಿಖೆ ನಡೆಸುತ್ತಿರುವುದೇ ಸರಿಯಲ್ಲ. ಆಗಲಿ, ತನಿಖೆ ನಡೆಸಿದ ಮೇಲೆ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಆದರೆ ಅದು ಬಿಟ್ಟು, ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಹೇಳಿದರು.

ಜಾರಿ ನಿರ್ದೇಶನಾಲಯದ ಪ್ರಕಾರ, ಮುಡಾದಿಂದ ಪಾರ್ವತಿಗೆ 14 ನಿವೇಶನಗಳನ್ನು ಹಸ್ತಾಂತರಿಸುವಲ್ಲಿ ಹಲವಾರು ಅಕ್ರಮಗಳ ಪುರಾವೆಗಳು ಪತ್ತೆಯಾಗಿವೆ. ಕೇಂದ್ರೀಯ ತನಿಖಾ ಸಂಸ್ಥೆ, ಇತ್ತೀಚೆಗೆ ಲೋಕಾಯುಕ್ತ ಪೊಲೀಸರಿಗೆ ಕಳುಹಿಸಿದ ಪತ್ರದಲ್ಲಿ, ಮುಡಾ ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ಒಟ್ಟು 1,095 ಸೈಟ್‌ಗಳನ್ನು “ಕಾನೂನುಬಾಹಿರವಾಗಿ” ಮಂಜೂರು ಮಾಡಿರುವುದು ತನ್ನ ತನಿಖೆಯಲ್ಲಿ ಕಂಡು ಬಂದಿದೆ ಎಂದು ಹೇಳಿದೆ.

”ರಾಜ್ಯಪಾಲರು ತನಿಖೆ ನಡೆಸುವಂತೆ ಹೇಳಿದ್ದರು, ಜಿಲ್ಲಾ ನ್ಯಾಯಾಲಯ (ವಿಶೇಷ ನ್ಯಾಯಾಲಯ) ಡಿ.24ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ತಿಳಿಸಿದೆ. ಅವರು (ಲೋಕಾಯುಕ್ತ ಪೊಲೀಸರು) ತನಿಖೆ ನಡೆಸುತ್ತಿದ್ದಾರೆ, ಆದರೆ ಈ ಮಧ್ಯೆ ಜಾರಿ ನಿರ್ದೇಶನಾಲಯ ಏಕೆ ಪತ್ರ ಬರೆಯುತ್ತಿದೆ? ತನಿಖಾ ಸಂಸ್ಥೆಯ ಉದ್ದೇಶವೇನು?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆ ನಡೆಸುತ್ತಿದೆ, ಅವರು ಸ್ವತಂತ್ರವಾಗಿ ವರದಿ ನೀಡಲಿ ಅವರು ಲೋಕಾಯುಕ್ತಕ್ಕೆ ಏಕೆ ಪತ್ರ ಬರೆದಿದ್ದಾರೆ? ಅವರು ಮಾಹಿತಿ ಹಂಚಿಕೊಳ್ಳಬಹುದು, ಆದರೆ ಅವರು ಪತ್ರ ಬರೆದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂಬುದು ಅರ್ಥವಲ್ಲ. ಲೋಕಾಯುಕ್ತಕ್ಕೆ ಪತ್ರ ಬರೆದಿರುವುದು ಸಂಪೂರ್ಣವಾಗಿ, ನೂರಕ್ಕೆ ನೂರು ರಾಜಕೀಯವಾಗಿದೆ” ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next