Advertisement

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

12:08 AM Nov 14, 2024 | Team Udayavani |

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಕಾನೂನು ಪ್ರಕಾರ ತನಿಖೆ ನಡೆಸಲಿ, ಅದಕ್ಕೆ ಯಾವುದೇ ರೀತಿಯ ಪ್ರತಿರೋಧವನ್ನೂ ನಾವು ಒಡ್ಡುವುದಿಲ್ಲ. ಇ.ಡಿ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಸುಳ್ಳು ಆರೋಪಗಳ ಮೇಲೆ ತನಿಖೆ ನಡೆಯುತ್ತಿದೆ ಎಂಬುದಷ್ಟೇ ಹೇಳಬಲ್ಲೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಮೈಸೂರಿನಲ್ಲಿ ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿ, ಇ.ಡಿ. ತನಿಖೆಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಮಾಜಿ ಪ್ರಧಾನಿ ದೇವೇಗೌಡರು ಸಿದ್ದರಾಮಯ್ಯನ ಸೊಕ್ಕು ಮುರಿಯುತ್ತೇವೆ, ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಎಷ್ಟರ ಮಟ್ಟಿಗೆ ಸರಿ? ಓರ್ವ ಮುಖ್ಯಮಂತ್ರಿಗೆ ಈ ರೀತಿ ಹೇಳುವುದು ಸರಿಯೇ ಎಂದು ಪ್ರಶ್ನಿಸಿದರು.

ಎಚ್‌.ಡಿ. ಕುಮಾರಸ್ವಾಮಿ ಬಗ್ಗೆ ಸಚಿವ ಜಮೀರ್‌ ಅಹ್ಮದ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಜಮೀರ್‌ ಅಹ್ಮದ್‌ ಹಾಗೂ ಕುಮಾರಸ್ವಾಮಿಯವರು ಒಂದು ಕಾಲದಲ್ಲಿ ಆಪ್ತರಾಗಿದ್ದರು. ಜಮೀರ್‌ ಮತ್ತು ಕುಮಾರಸ್ವಾಮಿ ತಿಕ್‌ ಅಂಡ್‌ ತಿನ್‌ ಫ್ರೆಂಡ್ಸ್ ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ. ಆ ವಿಚಾರದಲ್ಲಿ ಜಮೀರ್‌ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಇದೆಲ್ಲವೂ ಉಪಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಪ್ರಸ್ತುತ ಅವರ ನಡುವಿನ ಸಂಬಂಧ ಹೇಗಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದರು.

Advertisement

ಮುಸ್ಲಿಮರಿಗೆ ಮೀಸಲಾತಿ ನಿರ್ಧರಿಸಿಲ್ಲ
ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಬಗ್ಗೆ ಹಾಗೂ ಈ ಬಗ್ಗೆ ಬಿಜೆಪಿ ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿರುವಂತೆ ಮುಸ್ಲಿಮರಿಗೂ ಮೀಸಲಾತಿ ನೀಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ತೀರ್ಮಾನವನ್ನು ಸರಕಾರ ತೆಗೆದುಕೊಂಡಿಲ್ಲ. ಬಿಜೆಪಿಯವರಿಗೆ ಕೋಮುವಾದವನ್ನು ಸೃಷ್ಟಿಸುವುದೇ ಕಾಯಕವಾಗಿದೆ ಎಂದು ಕಿಡಿಕಾರಿದರು.

ಮೋದಿ ಆರೋಪ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಸುದ್ದಿಗಾರರ ಜತೆ ಮಾತನಾಡಿ, ಆರೋಪ ಸಾಬೀತು ಮಾಡದಿದ್ದರೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ? ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next