Advertisement
ಮುಡಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಆಗುತ್ತಿರುವ ಸಂಕಷ್ಟ ನೋಡಲಾಗದೇ ಪತ್ನಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಖುದ್ದು ಮುಡಾಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ಮೂಲಕ ಈ ಮುಡಾ ಹಗರಣ ಪ್ರಕರಣ ಹೊಸ ತಿರುವು ಪಡೆದಿದೆ. ಇನ್ನು ಸಿಎಂ ಪತ್ನಿ ಮುಡಾಗೆ ಬರೆದ ಪತ್ರದಲ್ಲೇನಿದೆ ಎನ್ನುವುದು ಈ ಕೆಳಗಿನಂತಿದೆ..
ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂ 464 ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಕ್ಕಾಗಿ ಪರಿಹಾರದ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ನನಗೆ ಮಂಜೂರು ಮಾಡಲಾದ 14 ನಿವೇಶನಗಳ ಹಿಂದಿರುಗಿಸುವ ಕುರಿತು. ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು. ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಿಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ಕಂಡು ಸಂತೋಷ ಮತ್ತು ಹೆಮ್ಮೆ ಪಟ್ಟವಳು.
Related Articles
Advertisement
ಈ ಬಗ್ಗೆ ನನ್ನ ಪತಿಯವರ ಅಭಿಪ್ರಾಯ ಏನಿದೆ ಎನ್ನುವುದು ನನಗೆ ತಿಳಿದಿಲ್ಲ. ನನ್ನ ಮಗನ ಬಳಿಯಾಗಲಿ, ನನ್ನ ಕುಟುಂಬದ ಇತರ ಸದಸ್ಯರ ಬಳಿಯಾಗಲಿ ಇದರ ಬಗ್ಗೆ ನಾನು ಚರ್ಚಿಸಿಲ್ಲ. ಇದು ನಾನು ನನ್ನ ಆತ್ಮ ಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ಕೈಗೊಂಡಿರುವ ತೀರ್ಮಾನ. ಈ ಹಂತದಲ್ಲಿ ಇಂತಹ ನಿರ್ಧಾರಕ್ಕೆ ಏಕೆ ಬಂದಿರಿ? ಎಂದು ಯಾರಾದರೂ ಕೇಳಬಹುದು. ಆರೋಪ ಕೇಳಿ ಬಂದ ದಿನವೇ ನಾನು ಈ ನಿರ್ಧಾರ ಮಾಡಿದ್ದೆ. ಆದರೆ, ಈ ಮುಡಾ ನಿವೇಶನ ಹಂಚಿಕೆಯ ಆರೋಪವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದ್ದು, ಈ ಅನ್ಯಾಯದ ವಿರುದ್ಧ ಹೋರಾಡಬೇಕು. ಅವರ ಸಂಚಿಗೆ ನಾವು ಬಲಿಯಾಗಬಾರದು ಎಂದು ಕೆಲವು ಹಿತೈಷಿಗಳು ಹೇಳಿದ ಕಾರಣಕ್ಕೆ ನಿವೇಶನ ವಾಪಸು ಮಾಡಬೇಕೆಂಬ ನಿರ್ಧಾರವನ್ನು ಕೈ ಬಿಟ್ಟಿದ್ದೆ.
ನನ್ನ ಈ ನಿರ್ಧಾರ ಅಚಲವಾಗಿದ್ದು, ಈ ನಿವೇಶನಗಳನ್ನು ವಾಪಸು ನೀಡುವುದರ ಜೊತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಕೊನೆಯದಾಗಿ, ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಮಾಧ್ಯಮ ಕ್ಷೇತ್ರದ ಬಂಧುಗಳಲ್ಲಿ ನನ್ನ ವಿನಮ್ರ ವಿನಂತಿ. ದಯವಿಟ್ಟು ರಾಜಕೀಯ ಕ್ಷೇತ್ರದಿಂದ ದೂರವಿದ್ದು, ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ, ಗೌರವಗಳಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.