ಮೈಸೂರು: ನಿವೇಶನ ಹಗರಣ ಕುರಿತಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮುಡಾ ಅಯುಕ್ತ ರಘುನಂದನ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇಡಿ ಅಧಿಕಾರಿಗಳು 2 ಪುಟಗಳಲ್ಲಿ 41 ಪ್ರಶ್ನೆಗಳನ್ನು ಆಯುಕ್ತರ ಮುಂದಿಟ್ಟು, ಉತ್ತರ ನೀಡುವಂತೆ ಕೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಬದಲಿ ನಿವೇಶನದ ಸುತ್ತಲೇ ಪ್ರಶ್ನೆಗಳು ಗಿರಕಿ ಹೊಡೆದಿದ್ದು, 2004ರಿಂದ 2023ರ ವರೆಗಿನ ಎಲ್ಲ ಮೂಲ ದಾಖಲೆಗಳನ್ನು ನೀಡುವಂತೆ ಕೇಳಲಾಗಿದೆ ಎನ್ನಲಾಗಿದೆ. ದೇವನೂರು ಬಡಾವಣೆ ರಚನೆಗಾಗಿ ಭೂಸ್ವಾದೀನ ಸಂಬಂಧ ಇಡಿ ಅಧಿಕಾರಿಗಳು ಮುಡಾ ಆಯುಕ್ತರಿಗೆ ಕೇಳಿರುವ ಪ್ರಶ್ನೆಗಳು ಇಂತಿವೆ.
– ದೇವನೂರು ಬಡಾವಣೆಯ ಭೂಸ್ವಾದೀನ ಕುರಿತು 18-09-1992ರಂದು ಹೊರಡಿಸಿದ ಸುತ್ತೋಲೆ ನೀಡಬೇಕು. ಭೂಸ್ವಾದೀನಕ್ಕೆ ಯಾವ ರೀತಿಯ ನಿಯಮ ಹಾಗೂ ನಿಬಂಧನೆ ಹೇರಲಾಗಿತ್ತು? 19 ಜನರಿಗೆ ಹಂಚಲಾಗಿರುವ ನಿವೇಶನದ ದಾಖಲೆ ಕೊಡಿ. ಬದಲಿ ನಿವೇಶನದ ಪರಿಹಾರದ ಮೊತ್ತ ಎಷ್ಟು ? ಡಿ ನೋಟಿಫಿಕೇಷನ್ ಕುರಿತ ಮೂಲ ದಾಖಲೆ ನೀಡಿ. ಡಿ ನೋಟಿಫಿಕೇಷನ್ ಮಾಡಲು ಕಾರಣ ಏನು ? ಅಂದಿನ ಸಭೆಯ ಮೂಲ ದಾಖಲೆ ನೀಡಿ.
-ಭೂಸ್ವಾದೀನ ಮಾಡಲು ಅನುಮತಿ ನೀಡಿದವರು ಯಾರು? ನೋಟಿಫಿಕೇಷನ್ ಆದ ಭೂಮಿ ಮಾರಾಟ ಮಾಡಲು ಹಾಗೂ ಪರಿಹಾರ ನೀಡಲು ಅವಕಾಶ ಇದೆಯಾ?ಭೂಸ್ವಾದೀನಕ್ಕೊಳಗಾದ ಸರ್ವೇ ನಂ. 462 ಮತ್ತು 464ರ ಸರ್ವೇ ಸ್ಕೆಚ್ ಕಾಪಿ ಕೊಡಿ. ನಿವೇಶನ ಪಡೆದ 19 ಜನರ ಹಣ ಪಡೆದುಕೊಳ್ಳಲಾಗಿದೆಯೇ? ಭೂಮಿ ಸಂಬಂಧ ಭೂಮಾಲಕ ದೇವರಾಜು ನೀಡಿದ ಪ್ರತಿಯನ್ನು ಯಾವ ರೀತಿ ಪಡೆದು ಕೊಳ್ಳಲಾಗಿದೆ? ಇತರ ಭೂಮಿಯ ಡಿ ನೋಟಿಫಿಕೇಷನ್ ದಾಖಲೆ ಕೊಡಿ. ಭೂಸ್ವಾದೀನ ಪ್ರಕ್ರಿಯೆ ಕುರಿತ ಸಂಪೂರ್ಣ ದಾಖಲೆ ನೀಡಿ.
-ಒತ್ತುವರಿಗೆ ಪರಿಹಾರವಾಗಿ ನೀಡಲಾಗಿರುವ ಬದಲಿ ನಿವೇಶನಗಳನ್ನು ಯಾವ ಮಾನದಂಡದ ಆಧಾರದ ಮೇಲೆ ನೀಡಿದ್ದೀರಿ ?ಒತ್ತುವರಿ ಮಾಡಿಕೊಂಡ ಭೂಮಿಗೆ ಬದಲಿ ನಿವೇಶನ ನೀಡಲು ಅರ್ಜಿ ಸ್ವೀಕರಿಸಲಾಗಿದೆಯೇ? ಯಾರ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ? ಜಂಟಿ ಸರ್ವೇ, ಸ್ಕೆಚ್ ಕಾಪಿ ಕೊಡಿ
– ಜಮೀನಿನ ಜಾಗದಲ್ಲಿ ಮೂಲಸೌಕರ್ಯ ಒದಗಿಸಲಾಗಿದೆಯೇ? ಬದಲಿ ನಿವೇಶನ ಹಂಚಿಕೆಯ ಬಳಿಕ ಪ್ರಸ್ತುತ ಆ ನಿವೇಶನದ ಪರಿಸ್ಥಿತಿ ಏನು? ಒತ್ತುವರಿ ಮಾಡಿಕೊಂಡ ಭೂಮಿಗೆ ಯಾವ ರೀತಿ ಪರಿಹಾರವನ್ನು ನಿಗದಿ ಮಾಡಲಾಯಿತು?
– 2017ರಂದು ನಡೆದ ಮುಡಾ ಸಭೆಯ ಸಂಪೂರ್ಣ ವಿವರ ಹಾಗೂ ನಿರ್ಣಯದ ಶಿಫಾರಸು ಪತ್ರ ನೀಡಿ. ಪಾರ್ವತಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಭೂಮಿ ಹಾಗೂ ನಿವೇಶನಗಳ ಮೂಲ ದಾಖಲೆ ನೀಡಿ. ದಾಖಲೆಯೊಂದಕ್ಕೆ ವೈಟ್ನರ್ ಹಾಕಿರುವುದು ಯಾರು ? ಅದರ ಹಿಂದಿನ ಉದ್ದೇಶ ಏನು ? ವೈಟ್ನರ್ ಹಾಕಿರುವ ಜಾಗದಲ್ಲಿ ಇದ್ದ ಅಂಶ ಯಾವುದು ಎಂದು ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.