Advertisement

MUDA Case: ನಾಳೆ 14 ನಿವೇಶನಗಳ ಸ್ಥಳ ಮಹಜರು?

03:20 AM Oct 03, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ಮಂಗಳವಾರ ತಡರಾತ್ರಿ ಮೈಸೂರು ತಾಲೂಕು ಕಚೇರಿಯ ಅಭಿಲೇಖನ ಶಾಖೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಗುರುವಾರ ಅಥವಾ ಶುಕ್ರವಾರ 14 ನಿವೇಶನಗಳ ಸ್ಥಳ ಮಹಜರು ಮಾಡುವ ಸಾಧ್ಯತೆಗಳಿವೆ.

Advertisement

ಲೋಕಾಯುಕ್ತ ಎಸ್ಪಿ ಉದೇಶ್‌ ನೇತೃತ್ವದ ತನಿಖಾ ತಂಡ ಮಂಗಳವಾರ ತಡರಾತ್ರಿ ತಾಲೂಕು ಕಚೇರಿಗೆ ಭೇಟಿ ನೀಡಿ, ವಿವಾದದ ಮೂಲವಾಗಿರುವ ಕೆಸರೆ ಗ್ರಾಮದ ಸರ್ವೇ ನಂ. 464 ಸಂಬಂಧ ಮಹತ್ವದ ದಾಖಲೆ ಪರಿಶೀಲಿಸಿದರು.

ನೋಟಿಸ್‌ ಅಂಟಿಸಲು ತಯಾರಿ
ವಿಚಾರಣೆಗಾಗಿ ನೋಟಿಸ್‌ ನೀಡುವ ಸಂಬಂಧ ಪ್ರಕರಣದ ಎ3 ಆಗಿರುವ ಮಲ್ಲಿಕಾರ್ಜುನಸ್ವಾಮಿ ಮನೆಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಆತ 4 ವರ್ಷಗಳ ಹಿಂದೆಯೇ ಮನೆ ಬಾಡಿಗೆಗೆ ನೀಡಿ, ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಅವರ ಮಾಹಿತಿ ಬಾಡಿಗೆದಾರರಿಗೂ ತಿಳಿದಿಲ್ಲ. ಪ್ರತಿ ತಿಂಗಳು ಮಲ್ಲಿಕಾರ್ಜುನಸ್ವಾಮಿ ಖಾತೆಗೆ ಬಾಡಿಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ.

ಗಾಂಧಿ ಜಯಂತಿ ರಜೆ ಹಿನ್ನೆಲೆಯಲ್ಲಿ ಬುಧವಾರ ಲೋಕಾಯುಕ್ತ ಕಚೇರಿಗೆ ರಜೆ ಇದ್ದ ಕಾರಣ ತನಿಖೆಗೆ ಕೊಂಚ ಬ್ರೇಕ್‌ ಬಿದ್ದಿದೆ. ಆದ್ದರಿಂದ ಬುಧವಾರ ನಡೆಯಬೇಕಿದ್ದ ವಿಜಯನಗರದ ವಿವಿಧ ಹಂತದಲ್ಲಿನ 14 ನಿವೇಶನಗಳ ಮಹಜರು ಪ್ರಕ್ರಿಯೆ ಗುರುವಾರ ಅಥವಾ ಶುಕ್ರವಾರ ನಡೆಯುವ ಸಾಧ್ಯತೆ ಇದೆ.
ದೂರುದಾರ ಸ್ನೇಹಮಯಿ ಕೃಷ್ಣ ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾದರೆ ಮಹಜರು ಶುಕ್ರವಾರ ನಡೆಯಲಿದೆ.

ಗುರುವಾರ ದಸರಾ ಮಹೋತ್ಸವದ ಉದ್ಘಾಟನೆಗೊಳ್ಳಲಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೂಡ ಮೈಸೂರಿನಲ್ಲಿರುತ್ತಾರೆ. ಲೋಕಾಯುಕ್ತ ಎಸ್ಪಿ ಉದೇಶ್‌ ನೇತೃತ್ವದ ತನಿಖಾ ತಂಡ ಈಗಾಗಲೇ ಕೆಸರೆ ಗ್ರಾಮಕ್ಕೆ ಭೇಟಿ ನೀಡಿ ನಂ.464 ರಲ್ಲಿನ 3.16 ಎಕರೆ ಜಾಗದ ಮಹಜರು ಕಾರ್ಯ ಪೂರ್ಣಗೊಳಿಸಿದ್ದಾರೆ.

Advertisement

ಇ.ಡಿ. ವಿಚಾರಣೆಗೆ ಇಂದು ಹಾಜರಾಗುವೆ: ಸ್ನೇಹಮಯಿ ಕೃಷ್ಣ
ಮೈಸೂರು: ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದು ಗುರುವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಕರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಮುಡಾ ಹಗರಣ ಸಂಬಂಧ ನಾನೇ ಇ.ಡಿ.ಗೆ ದೂರು ನೀಡಿದೆ. ಈ ಸಂಬಂಧ ಇ.ಡಿ. ಇಸಿಐಆರ್‌ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಲೋಕಾಯುಕ್ತ ಪ್ರಕರಣದ ತನಿಖೆ ನಡೆಸುತ್ತಿದೆ, ಇ.ಡಿ. ಹಣಕಾಸಿನ ವಹಿವಾಟಿನ ಬಗ್ಗೆ ತನಿಖೆ ನಡೆಸಲಿದೆ. ಇ.ಡಿ. ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next