Advertisement

ಮುಚಖಂಡಿಗೆ ಬರುತ್ತಾ ಶಿವನ ಮೂರ್ತಿ?

12:12 PM Feb 23, 2020 | Suhan S |

ಬಾಗಲಕೋಟೆ: ಬರೋಬ್ಬರಿ 128 ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಮುಚಖಂಡಿ ಕೆರೆ ಹಾಗೂ ಸುತ್ತಲಿನ ನೈಸರ್ಗಿಕ ಪರಿಸರ, ವೀರಭದ್ರೇಶ್ವರ ದೇವಾಲಯ ಒಳಗೊಂಡ ಸುಂದರ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಸರ್ಕಾರದ ಸ್ಪಂದನೆ ದೊರೆಯುತ್ತಾ? ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.

Advertisement

ಹೌದು, ಬ್ರಿಟಿಷರು 1882ರಲ್ಲಿ ಸುಮಾರು 721 ಎಕರೆ ವಿಶಾಲ ಜಾಗೆ, ಎರಡು ಗುಡ್ಡಗಳ ಮಧ್ಯೆ ಇರುವ ಮುಚಖಂಡಿ ದೇವಸ್ಥಾನದ ಪಕ್ಕದಲ್ಲಿ ಸುಂದರ ಕೆರೆಯನ್ನು ನಿರ್ಮಿಸಿದ್ದಾರೆ. ಇಂದಿನ ಬಹುತೇಕ ಜಲಾಶಯಗಳಿಗೂ ಶೆಡ್ಡು ಹೊಡೆಯುವ ಮಾದರಿಯಲ್ಲಿ ಈ ಕೆರೆಯಿದ್ದು, 128 ವರ್ಷವಾದರೂ, ತನ್ನ ನಿರ್ಮಾಣ, ಗಟ್ಟಿಮುಟ್ಟಾದ ಬಾಳಿಕೆ ಮೂಲಕ ಎಲ್ಲರ ಗಮನ ಸೆಳೆಯುತ್ತದೆ.

ಅದ್ಭುತ ತಾಣ: ಮುಚಖಂಡಿ ಕೆರೆ, ಬಾಗಲಕೋಟೆ, ನವನಗರ ಹಾಗೂ ಸುತ್ತಲಿನ ಸುಮಾರು 10ಕ್ಕೂ ಹೆಚ್ಚು ಹಳ್ಳಿಗರ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಸುಂದರ ಪರಿಸರ ಮಡಿಲಿನಲ್ಲಿ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನವಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ದೇವಸ್ಥಾನಕ್ಕೆ ಬಂದವರೆಲ್ಲ ಈ ಕೆರೆಯನ್ನು ವೀಕ್ಷಿಸಿಯೇ ತೆರಳುತ್ತಾರೆ. ಇಂತಹ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಬೇಡಿಕೆಯ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

ಕಳೆದ 2015-16ರಲ್ಲಿ ಮುಚಖಂಡಿ ಕೆರೆ, ವೀರಭದ್ರೇಶ್ವರ ದೇವಸ್ಥಾನ ಒಳಗೊಂಡ ಇಡೀ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಲು ಸುಮಾರು 9.37 ಕೋಟಿ ಮೊತ್ತದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. 2016ರ ಬಜೆಟ್‌ನಲ್ಲಿ ಐತಿಹಾಸಿಕ ಮುಚಖಂಡಿ ಕೆರೆ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಣೆಯೂ ಆಗಿತ್ತು. ಆದರೆ, ಅದು ಘೋಷಣೆಗೆ ಸಿಮೀತವಾಯಿತೇ ಹೊರತು, ಈ ವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ನಿರ್ಮಿತಿ ಕೇಂದ್ರದಿಂದ ತಯಾರಾದ ವಿಸ್ತೃತ ಯೋಜನಾ ವರದಿ, ಪ್ರವಾಸೋದ್ಯಮ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮಂಜೂರಾತಿ ದೊರೆತಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಈ ಯೋಜನೆಗೆ ಸರ್ಕಾರ ಅಸ್ತು ಅನ್ನುತ್ತಾ ಎಂಬುದು ನಗರದ ಜನರ ಒತ್ತಾಸೆ.

ಬರಡಾಗಿದ್ದ ಕೆರೆಗೆ ನೀರು: ಕಳೆದ ಹಲವು ವರ್ಷಗಳಿಂದ ಬರಿಡಾಗಿದ್ದ ಮುಚಖಂಡಿ ಕೆರೆಗೆ, ಆಲಮಟ್ಟಿ ಜಲಾಶಯದ ಹಿನ್ನೀರನ್ನು ತುಂಬಿಸಲು 12.50 ಕೋಟಿ ರೂ. ಖರ್ಚು ಮಾಡಲಾಗಿದೆ. 6 ಕಿ.ಮೀ ವರೆಗೆ ಪೈಪ್‌ಲೈನ್‌ ಅಳವಡಿಸಿ, ನೀರು ತುಂಬಿಸಲಾಗುತ್ತಿದೆಯಾದರೂ, ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ದೊಡ್ಡ ಕೆರೆಗೆ ಸಣ್ಣ ಪೈಪ್‌ ಅಳವಡಿಸಿರುವುದರಿಂದ ಕೃತಕವಾಗಿ ತುಂಬುವ ನೀರು, ಕೆರೆಯ ಆವರಣ ತುಂಬುತ್ತಿಲ್ಲ. ಆದರೂ, ಸುಮಾರು 2ರಿಂದ 3 ತಿಂಗಳ ಕಾಲ ಕೆರೆಗೆ ನೀರು ತುಂಬಿಸುತ್ತಿದ್ದು, ಇದರಿಂದ ನವನಗರ, ಶಿಗಿಕೇರಿ, ಮುಚಖಂಡಿ, ಸೂಳಿಕೇರಿ, ಕಗಲಗೊಂಬ ಸಹಿತ ಹತ್ತಾರು ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚಳವಾಗಿದ್ದು, ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳು ಪುನಾರಂಭಗೊಂಡಿವೆ.

Advertisement

ಈಗ ಅಳವಡಿಸಿರುವ 250 ಎಂಎಂ ವ್ಯಾಸದ ಪೈಪ್‌ಗ್ಳ ಬದಲು ದೊಡ್ಡ ಪೈಪ್‌ ಅಳವಡಿಸಿ, ಕೆರೆ ಪೂರ್ಣ ತುಂಬಿಸಬೇಕು. ಇದೊಂದು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಒತ್ತಾಯ ನಿರಂತರ ಕೇಳಿ ಬರುತ್ತಿದ್ದು, ಘೋಷಣೆ  ಮಾಡಿದ ಸರ್ಕಾರ ಅನುದಾನ ಕೊಡಬೇಕಿದೆ.

ಶಿವನಮೂರ್ತಿ-ಈಜುಕೊಳ : ಮುಚಖಂಡಿ ಕೆರೆಯನ್ನು ಸಮಗ್ರ ಅಭಿವೃದ್ಧಿಪಡಿಸಲು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಯೋಜನೆ ರೂಪಿಸಿದ್ದು, ಒಟ್ಟು ನಾಲ್ಕು ಭಾಗವಾಗಿ ಸಮಗ್ರ ಅಭಿವೃದ್ಧಿಗೊಳಿಸುವ ಯೋಜನೆ ಒಳಗೊಂಡಿದೆ. 1ನೇ ಹಂತದಲ್ಲಿ ಕೆರೆಯಲ್ಲಿ ಮ್ಯೂಜುಕಲ್‌ ಪೌಂಟೇನ್‌ (ಸಂಗೀತ

ಕಾರಂಜಿ), ಪಕ್ಕದಲ್ಲಿ ಈಜುಕೊಳ, ಸುಮಾರು 500 ಜನ ಕುಳಿತುಕೊಳ್ಳಲು ಗ್ಯಾಲರಿ, ಪಾದಚಾರಿ ಮಾರ್ಗ (ಈಗಾಗಲೇ ಕೆರೆಯ ಎರಡೂ ಪಕ್ಕದಲ್ಲಿ ತಲಾ ಅರ್ಧ ಕಿ.ಮೀ. ಉದ್ದದ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ) ಹಾಗೂ ಕಂಟ್ರೋಲ್‌ ರೂಂ ನಿರ್ಮಾಣ ಒಳಗೊಂಡಿದೆ.

2ನೇ ಭಾಗದಲ್ಲಿ 6 ಮೀಟರ್‌ ಎತ್ತರದ ಶಿಖರ, 3 ಮೀಟರ್‌ ದಿಯಾ, ಭೂದೃಶ್ಯ (ಲ್ಯಾಂಡ್‌ ಸ್ಕೇಪಿಂಗ್‌), ಮಕ್ಕಳಿಗಾಗಿ ಉದ್ಯಾನವನ, ಸೌರ ವಿದ್ಯುತ್‌ ದೀಪಗಳು, ಕುಳಿತುಕೊಳ್ಳಲು ಬೆಂಚ್‌ಗಳು, ಕಸದ ತೊಟ್ಟಿ ಅಳವಡಿಕೆ ಮಾಡುವುದಾಗಿದೆ. 3ನೇ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಅಡಿ ಎತ್ತರದ ಬೃಹತ್‌ ಶಿವನಮೂರ್ತಿ, ವೀವೂ ಪಾಯಿಂಟ್‌, ರಸ್ತೆ ಸಂಪರ್ಕ ಒಳಗೊಂಡಿದ್ದು, ಬೃಹತ್‌ ಶಿವನಮೂರ್ತಿ ಅಳವಡಿಕೆಯಿಂದ ಈ ಕ್ಷೇತ್ರಕ್ಕೆ ಇನ್ನಷ್ಟು ಮೆರಗು ಬರಲಿದೆ. ಅಲ್ಲದೇ ಕೆರೆಯ ಎರಡೂ ಬದಿಗೆ ನಿಸರ್ಗದತ್ತವಾದ ಬೃಹತ್‌ ಬೆಟ್ಟಗಳಿದ್ದು, ಅಲ್ಲಿನ ಶಿವನಮೂರ್ತಿ ನಿರ್ಮಿಸಿ, ಅದಕ್ಕೆ ರಸ್ತೆ ನಿರ್ಮಿಸಿದರೆ, ಇದೊಂದು ಅದ್ಭುತ ತಾಣವಾಗುವುದರಲ್ಲಿ ಸಂಶಯವಿಲ್ಲ. ಇನ್ನು 4ನೇ ಭಾಗವಾಗಿ ತಿಂಡಿ-ತಿನಿಸು ಮಾರಾಟ ಮಳಿಗೆ, ಪ್ರವಾಸಿಗರಿಗೆ ಪಾರ್ಕಿಂಗ್‌, ಶುದ್ಧ ಕುಡಿಯುವ ನೀರಿನ ಘಟಕ, ಕೊಳವೆ ಬಾವಿ ಕೊರೆಸುವುದು, ಕಾಂಪೌಂಡ್‌ ನಿರ್ಮಾಣ, ಕೊಳದ ಸುತ್ತಲೂ ಪುನರ್‌ ನವೀಕರಣ ಮಾಡುವುದು, ಕೆರೆಯ ನಿರ್ಮಾಣದ ಗೋಡೆಗೆ ಲೇಸರ್‌ ದೀಪ ಅಳವಡಿಸುವುದು, ಉದ್ಯಾನವನ ಅಭಿವೃದ್ಧಿ ಸೇರಿ ಒಟ್ಟು ನಾಲ್ಕು ಭಾಗಗಳಲ್ಲಿ ಕೆರೆಯ ಸಮಗ್ರ ಅಭಿವೃದ್ಧಿಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ನವನಗರಕ್ಕೆ ಹೊಂದಿಕೊಂಡಿರುವ ಮುಚಖಂಡಿ ದೇವಸ್ಥಾನ ಮತ್ತು ಕೆರೆ ಸಮಗ್ರ ಅಭಿವೃದ್ಧಿಪಡಿಸಬೇಕು. ಇಲ್ಲಿ ಬೃಹತ್‌ ಶಿವನಮೂರ್ತಿ ನಿರ್ಮಿಸಿ, ಇದೊಂದು ಪ್ರವಾಸಿ ತಾಣವಾಗಿ ಮಾರ್ಪಡಿಸಬೇಕು. ಇದರಿಂದ ಇಡೀ ನಗರ ಹಾಗೂ ಜಿಲ್ಲೆಯ ಜನರಿಗೆ ಪಿಕ್‌ನಿಕ್‌ ಸ್ಪಾಟ್‌ ಆಗಿ ರೂಪುಗೊಳ್ಳಲಿದೆ. -ಜಿ.ಎನ್‌. ಪಾಟೀಲ, ಬಿಟಿಡಿಎ ಮಾಜಿ ಸಭಾಪತಿ

 

-ಎಸ್‌.ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next