ಬೆಂಗಳೂರು: ವಿಧಾನ ಪರಿಷತ್‌ಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್ ಬರೋಬ್ಬರಿ 1224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ವಜ್ರ, ಪ್ಲಾಟಿನಂ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣ ಹೊಂದಿರುವುದಾಗಿಯೂ ಘೋಷಿಸಿಕೊಂಡಿದ್ದಾರೆ.
ಎಂ.ಟಿ.ಬಿ.ನಾಗರಾಜ್ ಅವರ ಹೆಸರಲ್ಲಿ 884 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿ ಹಾಗೂ ಪತ್ನಿ ಶಾಂತಕುಮಾರಿ ಅವರ ಹೆಸರಲ್ಲಿ 331 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಎಂ.ಟಿ.ಬಿ.ನಾಗರಾಜ್ ಹೆಸರಲ್ಲಿ 461 ಕೋಟಿ ರು. ಮೌಲ್ಯದ ಚರಾಸ್ತಿ, 416 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ 160 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ನಾಗರಾಜ್ ಅವರು 52.75 ಕೋಟಿ ರೂ. ಸಾಲ ಹೊಂದಿದ್ದರೆ, ಅವರ ಪತ್ನಿ ಹೆಸರಲ್ಲಿ 1.97 ಕೋಟಿ ರೂ. ಸಾಲವಿದೆ ಎಂದು ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ. ಎಂ.ಟಿ.ಬಿ. ಗರಾಜ್ 2.23 ಕೋಟಿ ರೂ. ಮೌಲ್ಯದ ವಜ್ರ, ಪ್ಲಾಟಿನಂ ಸೇರಿದಂತೆ ಚಿನ್ನಾಭರಣ ಹೊಂದಿದ್ದರೆ, ಪತ್ನಿಯ ಬಳಿ 1.48 ಕೋಟಿ. ರೂ. ಮೌಲ್ಯದ ವಜ್ರ, ಪ್ಲಾಟಿನಂ ಸೇರಿದಂತೆ ಚಿನ್ನಾಭರಣವಿದೆ. ಒಟ್ಟು 2.48 ಕೋಟಿ ರೂ. ಮೌಲ್ಯದ ಐದು ಕಾರು ಹೊಂದಿದ್ದಾರೆ. 51.50 ಲಕ್ಷ ರೂ. ಮೌಲ್ಯದ ಲ್ಯಾಂಡ್ ರೋವರ್, 96.12 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ಸೇರಿವೆ.
ಶಂಕರ್ 301 ಕೋಟಿ: ವಿಧಾನಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಆರ್. ಶಂಕರ್ ಕೂಡ ಕೋಟ್ಯಾಧೀಶರಾಗಿದ್ದು, 301.38 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಆರ್. ಶಂಕರ್ ಹೆಸರಿನಲ್ಲಿ 195 ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೆ, ಪತ್ನಿ ಧನಲಕ್ಷ್ಮೀ ಹೆಸರಲ್ಲಿ 106 ಕೋಟಿ ರೂ. ಮೌಲ್ಯದ ಆಸ್ತಿ ಇದೆ.
ಶಂಕರ್ ತಮ್ಮ ಹೆಸರಲ್ಲಿ 28.90 ಕೋಟಿ ರೂ. ಮೌಲ್ಯದ ಚರಾಸ್ತಿ, 166.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ13.90 ಕೋಟಿ ರೂ. ಮೌಲ್ಯದ ಚರಾಸ್ತಿ, 82.25 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಆರ್. ಶಂಕರ್ 44.63 ಕೋಟಿ ರೂ. ಹಾಗೂ ಅವರ ಪತ್ನಿ 21.93 ಕೋಟಿ ರೂ. ಸಾಲ ಹೊಂದಿದ್ದಾರೆ. ಆರ್.ಶಂಕರ್ ಬಳಿ 73.72 ಲಕ್ಷ ರೂ. ಮೌಲ್ಯದ 2 ಕೆ.ಜಿ. ಚಿನ್ನವಿದೆ. ಪತ್ನಿ ಬಳಿಯೂ 2 ಕೆ.ಜಿ. ಚಿನ್ನ ಹಾಗೂ 10 ಲಕ್ಷ ರೂ.ಮೌಲ್ಯದ ವಜ್ರದ ಆಭರಣವಿದೆ ಎಂದು ವಿವರದಲ್ಲಿದೆ.