Advertisement
ಇಂದು ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಸಾಹಿತಿಗಳು ಅಲ್ಪಸಂಖ್ಯಾಕರಾಗುತ್ತಿದ್ದಾರೆ. ಪ್ರಶಸ್ತಿ, ಗೌರವ ಪಡೆದುಕೊಳ್ಳುವ ವಿಷಯದಲ್ಲಿ ಅವರು ಅವಕಾಶ ವಂಚಿತರು ಮತ್ತು ತೀರಾ ಹಿಂದುಳಿದವರು. ಗಂಭೀರ ಲೇಖಕರು ಮತ್ತು ವಿಮರ್ಶಕರು ಹಾಸ್ಯಬರಹಗಾರರನ್ನು ಅಸ್ಪೃಶ್ಯರಂತೆ ದೂರವಿಡುವುದರಿಂದ ಅವರು ದಲಿತರೂ ಹೌದು! ಒಟ್ಟಿನಲ್ಲಿ ಹಾಸ್ಯ ಸಾಹಿತಿಗಳಿಗೆ ಅಹಿಂದ ವರ್ಗದಲ್ಲಿ ಸೇರುವ ಎಲ್ಲ ಅರ್ಹತೆಗಳೂ ಇವೆ ಅನ್ನಬಹುದು.
Related Articles
Advertisement
ಉತ್ತರಧ್ರುವದಿಂ ದಕ್ಷಿಣಧ್ರುವಕೂಎಂಎಸ್ಎನ್ ಮತ್ತು ನನ್ನದು ಮೂರು ದಶಕಗಳ ಗೆಳೆತನ. ನಮ್ಮ ಸ್ನೇಹಕ್ಕೆ ಕಾರಣ ನಾವಿಬ್ಬರೂ ಕರುಗಳು ಸಾರ್ ಕರುಗಳು. ನಗೆ ಲೇಖ-ಕರು ಮಾತ್ರವಲ್ಲ ನಿವೃತ್ತ ಬ್ಯಾಂ-ಕರುಗಳು! ಅವರು ಬೆಂಗಳೂರಿನ ಉತ್ತರದಲ್ಲಿರುವ ಮಲ್ಲೇಶ್ವರದಲ್ಲಿದ್ದಾರೆ. ನಾನು ದಕ್ಷಿಣದ ಅಂಜನಾಪುರದಲ್ಲಿದ್ದೇನೆ. ನಡುವೆ 40 ಕಿಮೀ ಅಂತರ. ಆದರೂ ವರಕವಿಗಳು ಬರೆದದ್ದನ್ನು ತಿರುಚಿ ಹೇಳುವುದಾದರೆ- ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಹಾಸ್ಯದ ಗಾಳಿಯು ಬೀಸುತಿದೆ
ಮೂರ್ತಿಯ ಗದ್ಯಕೆ ಡುಂಡಿಯ ಪದ್ಯವು
ಚುಂಬಿಸಿ ನಗೆಯನು ಸೂಸುತಿದೆ ಹಾಸ್ಯೋತ್ಸವ, ನಗೆ ಹಬ್ಬಗಳ ಉಬ್ಬರದ ದಿನಗಳು ಆರಂಭವಾಗುವ ಮೊದಲೇ ಎಂಎಸ್‌ಎನ್ ಮತ್ತು ನಾನು ಅನೇಕ ಊರುಗಳಲ್ಲಿ ಜಂಟಿಯಾಗಿ ವಿನೋದ ಗೋಷ್ಠಿಗಳನ್ನು ನಡೆಸಿದ್ದೆವು. ದಕ್ಷಿಣ ಕ ನ್ನಡ ಜಿಲ್ಲೆಯ ಜಿಲ್ಲೆಯ ಹಲವು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಾಹಿತ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದೆವು. ಎಂಎಸ್‌ಎನ್‌ಅವರನ್ನು ನಾನು ಮೊದಲ ಬಾರಿ ನೋಡಿದಾಗ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ ಅನ್ನಿಸುತ್ತದೆ. ಅವರ ಜೀವನೋತ್ಸಾಹ ಮತ್ತು ಬರವಣಿಗೆಯ ಸತ್ವವನ್ನು ಗಮನಿಸಿದಾಗ ಎಂಎಸ್‌ಎನ್‌ಅವರಿಗೆ ಎಪ್ಪತ್ತಾಯಿತು ಅನ್ನಿಸುವುದಿಲ್ಲ. ಎಂಎಸ್‌ಎನ್‌ಗೆ ಎಪ್ಪತ್ತೆ? ಇಲ್ಲ, ಇಲ್ಲ,ಇಪ್ಪತ್ತೆ ಒಪ್ಪುತ್ತೆ!
ಅವರಲ್ಲಿ ನಾನು ಮೆಚ್ಚಿದ ಮತ್ತು ಅನುಸರಿಸಲು ಯತ್ನಿಸುವ ಗುಣವೆಂದರೆ ತನ್ನನ್ನು ತಾನೇ ಹಾಸ್ಯ ಮಾಡಿಕೊಳ್ಳುವುದು. ಎಂಎಸ್‌ಎನ್ ಅವರ ಬಾಯಿಯಿಂದಲೇ ನಾನು ಕೇಳಿದ ಈ ಪ್ರಸಂಗವನ್ನು ಗಮನಿಸಿ. ಅವರು ಬ್ಯಾಂಕ್ ಮ್ಯಾನೇಜರ್ ಆಗಿ¨ªಾಗ ಎಮ್ಮೆ ಖರೀದಿಸಲು ಸಾಲ ಪಡೆದಿದ್ದ ಹೆಂಗಸೊಬ್ಬಳು ಹಲವು ವರ್ಷಗಳ ನಂತರ ಇವರನ್ನು ನೋಡಿದಾಗ ಗುರುತಿಸಿ ನಮಸ್ಕರಿಸುತ್ತಾಳೆ. ಚಕಿತರಾದ ಎಂಎಸ್‌ಎನ್, “”ಏನಮ್ಮಾ, ಇನ್ನೂ ನನ್ನನ್ನು ನೆನಪಿಟ್ಟುಕೊಂಡಿದ್ದೀಯಲ್ಲ. ಪರವಾಗಿಲ್ವೆ!” ಅನ್ನುತ್ತಾರೆ. ಆಗ ಆ ಹಳ್ಳಿ ಹೆಂಗಸು ಹೇಳಿದ್ದು, “”ಏನ್ ಬುದ್ಧಿ ಅಂಗಂತೀರಿ. ನೀವು ನನ್ನ ಪಾಲಿಗೆ ದ್ಯಾವ್ರಿದ್ದಾಂಗೆ. ನೀವು ಕೊಡಿಸಿದ ಎಮ್ಮೆ ದೆಸೆಯಿಂದ ಇವತ್ತು ನನ್ನ ಗುಡಿಸಲಲ್ಲಿ ದೀಪ ಉರೀತೈತೆ. ದಿನಾ ಬೆಳಿಗ್ಗೆ ಆ ಎಮ್ಮೆ ಮುಖ ನೋಡಾªಗೆಲ್ಲ ನಿಮ್ಮ ಮುಖಾನೆ ನೆಪ್ಪಾಯ್ತದೆ” ನೋಟು ಅಪಮೌಲ್ಯದ ಸಂದರ್ಭದಲ್ಲಿ ಸಂಪಾದಕ ಮಿತ್ರರೊಬ್ಬರು ನನಗೆ ಫೋನ್ ಮಾಡಿ, “”ನೀವು ಬ್ಯಾಂಕ್‌ಉದ್ಯೋಗಿಯಾಗಿರುವ ಲೇಖಕರು. ಡಿಮೋನಿಟೈಸೇಷನ್ ಬಗ್ಗೆ ನಮ್ಮ ಪತ್ರಿಕೆಗೆ ನಾಳೆ ಸಂಜೆಯ ಒಳಗೆ ಒಂದು ಹಾಸ್ಯ ಲೇಖನ ಬರೆದುಕೊಡುತ್ತೀರಾ?” ಎಂದು ಕೇಳಿದರು. ಅವರು ಕೊಟ್ಟ ಕಾಲಾವಕಾಶ ತುಂಬಾ ಕಡಿಮೆ ಇದ್ದದ್ದರಿಂದ “ಆಗುವುದಿಲ್ಲ’ ಎಂದೆ. ಮರುದಿನ ಮುಂಜಾನೆ ಬೇಗ ಎಚ್ಚರವಾಗಿ ಆ ವಿಷಯದ ಬಗ್ಗೆ ಯೋಚಿಸುತ್ತ ಹಾಸಿಗೆಯಲ್ಲಿ ಉರುಳು ಸೇವೆ ಮಾಡತೊಡಗಿದಾಗ, “ಬರೆಯಬಹುದು’ ಅನ್ನಿಸಿತು. ಬೆಳಿಗ್ಗೆ ಹತ್ತುಗಂಟೆಯ ಹೊತ್ತಿಗೆ ಸಂಪಾದಕರಿಗೆ ಫೋನ್ ಮಾಡಿ, “ಲೇಖನ ಬರೆದುಕೊಡುತ್ತೇನೆ’ ಎಂದೆ. ಅವರು, “”ಬೇಡಾ ಸಾರ್. ನೀವು ಆಗಲ್ಲ ಅಂದ ಕೂಡಲೆ ನರಸಿಂಹಮೂರ್ತಿಯವರನ್ನು ಕೇಳಿದೆ. ಅವರು ನಿನ್ನೆ ರಾತ್ರಿಯೇ ಮೈಲ್ ಮಾಡಿ¨ªಾರೆ” ಅಂದಾಗ ನನಗೆ ಅಚ್ಚರಿಯಾಯಿತು. ಇದು ಎಂಎಸ್‌ಎನ್‌ಅವರ ಸಾಮರ್ಥ್ಯ. ಅವಸರದಲ್ಲಿ ಸರಸರನೆ ಬರೆದರೂ ಅದು ಸ್ವಾರಸ್ಯಕರವಾಗಿರುತ್ತದೆ. ಅದಕ್ಕೆ ಹೇಳಿದ್ದು ಎಂಎಸ್‌ಎನ್ ಹಾಸ್ಯ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು. ಪ್ರತಿಯೊಂದು ಭಾಷಣಕ್ಕೂ ಒಂದಷ್ಟು ಹೋಮ್‌ವರ್ಕ್ ಮಾಡಿಕೊಂಡೇ ಹೋಗುತ್ತಾರೆ. ಬರೆಯುವ ಒತ್ತಡ ವಿಪರೀತವಾಗಿದ್ದರೂ ಗೆಳೆಯರು ಕಾರ್ಯಕ್ರಮಕ್ಕೆ ಕರೆದರೆ ಇಲ್ಲ ಅನ್ನುವುದಿಲ್ಲ. ಅವರು ಯಾವುದೇ ಊರಿಗೆ ಭಾಷಣ ಮಾಡಲು ಹೋದರೂ ಸಮಯವನ್ನು ಹಾಳು ಮಾಡುವುದಿಲ್ಲ. ಸಭಾಂಗಣಕ್ಕೆ ಕರೆದೊಯ್ಯಲು ಸಂಘಟಕರು ಬರುವವರೆಗೂ ಸೀರಿಯಲ್‌ಗೆ ಸಂಭಾಷಣೆ ಬರೆದು ಮೈಲ್ ಮಾಡುತ್ತ ಇರುವುದನ್ನು ನಾನು ನೋಡಿದ್ದೇನೆ. ನಮ್ಮ ಕಾರ್ಪೊರೇಶನ್ ಬ್ಯಾಂಕಿನ ಸಿರಿಗಂಧದ ಕಾರ್ಯಕ್ರಮಕ್ಕೆ ಕರೆದಾಗಲೆಲ್ಲ ಬಂದು ನಗದು ಖ್ಯಾತಿಯ ದಕ್ಷಿಣ ಕ ನ್ನಡ ಜಿಲ್ಲೆಯ ಬ್ಯಾಂಕಿನವರೂ ನಗುವಂತೆ ಮಾಡಿದವರು ಎಂಎಸ್‌ಎನ್. ಮೂರು ವರ್ಷಗಳ ಹಿಂದೆ ನಾನು ಮಂಗಳೂರಿನಲ್ಲಿ ಬ್ಯಾಂಕಿನಿಂದ ನಿವೃತ್ತನಾದ ಸಂದರ್ಭದಲ್ಲಿ ಅಭಿನಂದನ ಭಾಷಣ ಮಾಡಲು ಎಂಎಸ್‌ಎನ್ ಬೆಂಗಳೂರಿ ನಿಂದ ಸ್ವಸಂತೋಷ ದಿಂದಬಂದಿದ್ದನ್ನು ನಾನು ಎಂದಿಗೂ ಮರೆಯಲಾರೆ. ನಾನು ಮತ್ತು ಎಂಎಸ್‌ಎನ್ ಜೊತೆಯಾಗಿ ಭಾಗವಹಿಸಿದ ಕಾರ್ಯಕ್ರಮಗಳು ಲೆಕ್ಕವಿಲ್ಲದಷ್ಟು. ಅಲ್ಲಿ ಆಸ್ವಾದಿಸಿದ ರಸನಿಮಿಷಗಳನ್ನು ನಾನು ಆಗಾಗ ಮೆಲುಕು ಹಾಕುತ್ತೇನೆ. ಒಮ್ಮೆಯಂತೂ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಮುಗಿಸಿ ರಾತ್ರಿ 10.30ರ ಬಸ್ಸಿಗೆ ನಾನಾಗ ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಗಲು ಬಸ್ ಟಿಕೆಟ್ ಕಾದಿರಿಸಿದ್ದೆ. ಹೊಟೇಲ್ ಒಂದರಲ್ಲಿ ಎಂಎಸ್‌ಎನ್ ಮತ್ತು ಇನ್ನೂ ಕೆಲವು ಮಿತ್ರರು ಒಟ್ಟಿಗೆ ಊಟ, ಹರಟೆಯಲ್ಲಿ ನಿರತರಾಗಿದ್ದೆವು. ಮಾತಿನಲ್ಲಿ ಮೈಮರೆತಿದ್ದ ನನಗೆ ಬಸ್ಸಿಗೆ ಸಮಯವಾದದ್ದು ನೆನಪಾಗಲಿಲ್ಲ. ಎಂಎಸ್‌ಎನ್ ನೆನಪಿಸಿದರು. ಅಷ್ಟೇ ಅಲ್ಲ. “”ಡುಂಡಿ, ನಿಮಗೆ ಹೋಗಲು ಮನಸ್ಸಿಲ್ಲ ಅನ್ನಿಸುತ್ತದೆ. ಬನ್ನಿ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡು ಬರೋಣ. ಆಮೇಲೆ ಹರಟೆ ಮುಂದುವರಿಸೋಣ” ಎಂದು ಹಾಗೆಯೇ ಮಾಡಿದರು. ನಾನು ತುಂಬ ಖುಷಿಯಲ್ಲಿ¨ªಾಗ ಸ್ವಲ್ಪ ಸೋಮಾರಿತನ, ಬೇಜವಾಬ್ದಾರಿ ತೋರುವುದುಂಟು. ಎಂಎಸ್‌ಎನ್ ಹಾಗಲ್ಲ. ಯಾವಾಗಲೂ ಶಿಸ್ತಿನ ಸಿಪಾಯಿ. ಸಮಯದ ವಿಷಯದಲ್ಲಿತುಂಬಾಕಟ್ಟುನಿಟ್ಟು. ಅವರು ನನ್ನ ಪ್ರವಾಸಕಥನ ಅನಿವಾಸಿಗಳೇ ವಾಸಿ ಗೆ ಮುನ್ನುಡಿ ಬರೆದಿದ್ದಾರೆ. ನನ್ನ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಪಾಪ ಪಾಂಡು ಧಾರಾವಾಹಿಯ ಆರಂಭದ ಕಂತುಗಳಲ್ಲಿ ನನ್ನ ಹನಿಗವನಗಳನ್ನು ಬಳಸಿಕೊಳ್ಳುವಂತೆ ಸಿಹಿಕಹಿ ಚಂದ್ರುಗೆ ಸೂಚಿಸಿದವರು ಎಂಎಸ್‌ಎನ್. ಅವರ ಎರಡು ಪುಸ್ತಕಗಳಿಗೆ ನಾನು ಮುನ್ನುಡಿ ಬರೆದಿದ್ದೇನೆ. ಎರಡು ಸಲ ಯಾಕೆ ಅಂತೀರಾ? ಹಿಂದೊಮ್ಮೆ ಬರೆದದ್ದನ್ನು ಇಬ್ಬರೂ ಮರೆತಿದ್ದೆವು! ಎಂಎಸ್‌ಎನ್ ನನಗಿಂತ ಏಳು ವರ್ಷ ಹಿರಿಯರಾದರೂ ನನ್ನನ್ನು ಸಮಾನ ವಯಸ್ಕ ಗೆಳೆಯನಂತೆ ಕಾಣುತ್ತಾರೆ. ಅವರ ಆತ್ಮೀಯ ಸ್ನೇಹಿತರ ಬಳಗದಲ್ಲಿ ನಾನಿದ್ದೇನೆ ಅನ್ನುವುದು ನನಗೆ ಹೆಮ್ಮೆಯ ಸಂಗತಿ. (ಇಂದು ಬೆಂಗಳೂರಿನ ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಎಂ. ಎಸ್. ನರಸಿಂಹಮೂರ್ತಿಯವರಿಗೆ ಅಭಿನಂದನೆ) ಎಚ್. ಡುಂಡಿರಾಜ್