Advertisement

ಪುನಃಶ್ಚೇತನ ಉಪಕ್ರಮಗಳಿಂದ ಬಲವರ್ಧನೆ : ಸರಕಾರ ಎಂಎಸ್‌ಎಂಇ ಕ್ಷೇತ್ರದ ಕೈಹಿಡಿಯಬೇಕು

02:15 AM Jul 03, 2021 | Team Udayavani |

ಮಂಗಳೂರು: ಎಂಎಸ್‌ಎಂಇ ಕ್ಷೇತ್ರದ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರವಾದುದು. ಪ್ರಸ್ತುತ ಲಾಕ್‌ಡೌನ್‌ ಉತ್ಪಾದಕತೆ ಮತ್ತು ಮಾರುಕಟ್ಟೆ ಸ್ವರೂಪವನ್ನು ಬದಲಿಸಿದೆ. ಒಟ್ಟು ಖರೀದಿ ಸಾಮರ್ಥ್ಯ, ಉತ್ಪನ್ನಗಳ ಬೇಡಿಕೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದ್ದು, ಮಾರುಕಟ್ಟೆ ಬಲವರ್ಧನೆಗೆ ಪೂರಕ ನೀತಿ ರೂಪಿಸುವುದು ಮತ್ತಿತರ ಉಪಕ್ರಮಗಳಿಂದ ಚೇತರಿಕೆ ಸಾಧ್ಯ.
ಎಂಎಸ್‌ಎಂಇಗಳ ಮಾರುಕಟ್ಟೆ ನಿರ್ಮಾಣ ಚಟುವಟಿಕೆಗಳು, ಮೂಲಸೌಕರ್ಯಗಳು, ಸೇವಾ ಚಟುವಟಿಕೆಗಳನ್ನು ಆಧರಿಸಿದೆ. ಈ ವಲಯಗಳಲ್ಲಿ ಚಟುವಟಿಕೆ ವೇಗ ಪಡೆದರೆ ಎಂಎಸ್‌ಎಂಇ ಮಾರುಕಟ್ಟೆ ವೃದ್ಧಿಯಾಗಲು ಸಾಧ್ಯವಾಗುತ್ತದೆ.

Advertisement

ಮದುವೆ ಸಮಾರಂಭಕ್ಕೆ ಇಂತಿಷ್ಟೇ ಜನ ಸೇರಬೇಕು ಎಂಬ ಮಿತಿ ಇದೆ. ಎಂಎಸ್‌ಎಂಇ ಕ್ಷೇತ್ರದ ಬಹಳಷ್ಟು ಉದ್ದಿಮೆಗಳು ಇವುಗಳನ್ನು ಅವಲಂಬಿಸಿದ್ದು, ನಿರ್ಬಂಧಗಳಿಂದಾಗಿ ಮಾರುಕಟ್ಟೆ ಕುಸಿದಿದೆ.

ಬೃಹತ್‌ ಕೈಗಾರಿಕೆಗಳಿಗೆ, ಉತ್ಪಾದನ ವಲಯಕ್ಕೆ ಎಂಎಸ್‌ಎಂಇ ಪೂರಕ ಉತ್ಪನ್ನಗಳನ್ನು ಪೂರೈಸುವ ಕ್ಷೇತ್ರವೂ ಹೌದು. ಪ್ರಸ್ತುತ ಎಂಎಸ್‌ಎಂಇಗಳಲ್ಲಿ ಕಾರ್ಯನಿರ್ವಹಿಸಬಹುದಾದ ಕಾರ್ಮಿಕರ ಸಂಖ್ಯೆಗೆ ಶೇ. 50ರ ಮಿತಿ ಇದೆ. ಜತೆಗೆ ಕಚ್ಚಾವಸ್ತುಗಳ ಅಭಾವ ಮತ್ತು ಆರ್ಥಿಕ ಹಿನ್ನಡೆಗಳಿಂದಾಗಿ ಉತ್ಪಾದಕತೆಯ ಮೇಲೂ ಪರಿಣಾಮವಾಗಿದೆ. ಇದರಿಂದ ಬೃಹತ್‌ ಕೈಗಾರಿಕೆಗಳು, ಉತ್ಪಾದನ ವಲಯ, ಕಚ್ಚಾ ಸಾಮಗ್ರಿಗಳಿಗೆ ಹೊರ ರಾಜ್ಯಗಳನ್ನು ಅವಲಂಬಿಸಬೇಕಾಗಿ ಬರುವ ಸಾಧ್ಯತೆಗಳಿವೆ. ಇದು ಮುಂದಕ್ಕೆ ರಾಜ್ಯದ ಎಂಎಸ್‌ಎಂಇ ಕ್ಷೇತ್ರದ ಉತ್ಪನ್ನಗಳ ಮಾರುಕಟ್ಟೆ ಮೇಲೆ ಪರಿಣಾಮ ಬೀರಬಹುದು ಎಂದು ಉದ್ದಿಮೆದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಉತ್ಪಾದನ ವೆಚ್ಚವೂ ಜಾಸ್ತಿಯಾಗಿದೆ. ಇದನ್ನು ಸಮತೋಲನಕ್ಕೆ ತರುವ ಮಟ್ಟಕ್ಕೆ ಉತ್ಪನ್ನಗಳ ಬೆಲೆ ಹೆಚ್ಚಿಸಲಾಗದ ಪರಿಸ್ಥಿತಿಯಲ್ಲಿ ಉತ್ಪಾದಕರಿದ್ದಾರೆ. ಉತ್ಪನ್ನಗಳು ಮಾರುಕಟ್ಟೆಗೆ ಸರಬರಾಜಾಗಿ ಹೂಡಿದ ಬಂಡವಾಳ ಹಿಂದಿರುಗಿ ಬರದಿದ್ದರೆ ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ಇದನ್ನು ಸರಿದೂಗಿಸಲು ಇನ್ನಷ್ಟು ಸಾಲದ ಮೊರೆ ಹೋಗಬೇಕಾಗುತ್ತದೆ.

ಅಗತ್ಯವಾದ ಉತ್ತೇಜಕ ಕ್ರಮಗಳು
ಮೂಲ ಸೌಕರ್ಯ, ನಿರ್ಮಾಣ ಕ್ಷೇತ್ರಗಳಿಗೆ ಹೆಚ್ಚಿನ ಹೂಡಿಕೆ ಹರಿದು ಬರಲು ಕ್ರಮ. ಇದರಿಂದ ಎಂಎಸ್‌ಎಂಇ ಮಾರುಕಟ್ಟೆ ವೃದ್ಧಿಸುತ್ತದೆ.

Advertisement

ಗ್ರಾಹಕರಲ್ಲಿ ಖರೀದಿ ಶಕ್ತಿ ಹೆಚ್ಚಿಸಲು ಪೂರಕ ಕ್ರಮ. ಜನರಲ್ಲಿ ಉದ್ಯೋಗ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ಇರುವ ಅನಿಶ್ಚಿತತೆ ನಿವಾರಣೆಯಾಗಬೇಕು. ಆಗ ಜನರು ಖರೀದಿ ಒಲವು ತೋರುತ್ತಾರೆ.

ಹೂಡಿಕೆಗೆ ಸರಕಾರದಿಂದ ಪ್ರೋತ್ಸಾಹ ಸಿಕ್ಕಿದರೆ ಹೆಚ್ಚಿನ ಬಂಡವಾಳ ಹರಿದು ಬರಲು ಸಾಧ್ಯ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿ ಯಾಗಲಿವೆ. ಜನರ ಆದಾಯ ವೃದ್ಧಿಯಾಗಿ ಖರೀದಿ ಸಾಮರ್ಥ್ಯ ಹೆಚ್ಚುತ್ತದೆ.

ಮಧ್ಯಮ ವರ್ಗದ ಖರೀದಿಗೆ ಉತ್ತೇಜನ ನೀಡಲು ಪ್ರೋತ್ಸಾಹಕ ರಿಯಾಯಿತಿ. ಇದು ಮಾರುಕಟ್ಟೆ ವೃದ್ಧಿಗೆ ಸಹಕಾರಿ.
ನಿರಂತರವಾಗಿ ಏರುತ್ತಿರುವ ಕಚ್ಚಾ ಸಾಮಗ್ರಿಗಳ ಬೆಲೆಯನ್ನು ನಿಯಂತ್ರಿಸಲು ಕ್ರಮ. ಇದರಿಂದ ಉತ್ಪಾದನ ವೆಚ್ಚ ಕುಗ್ಗಿ ಸ್ಪರ್ಧಾತ್ಮಕ ದರದಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ.

ಎಂಎಸ್‌ಎಂಇಗಳು ಆರ್ಥಿಕ ಸಂಕಷ್ಟದ ವೇಳೆ ಒತ್ತಡದಲ್ಲಿವೆ. ಕೈಗಾರಿಕೆಗಳು ಸುಗಮವಾಗಿ ಕಾರ್ಯಾ ಚರಿಸಲು ನಿಯಮಗಳು, ಮಾರ್ಗಸೂಚಿಗಳಲ್ಲಿ ಕೆಲವು ರಿಯಾಯಿತಿ, ಸಡಿಲಿಕೆ ನೀಡಬೇಕು.

–  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next