Advertisement
ಒಂದು ಕಡೆ ಆದಾಯವಿಲ್ಲ. ಇನ್ನೊಂದು ಕಡೆ ಕನಿಷ್ಟ ವೆಚ್ಚಗಳನ್ನು ಭರಿಸಲೇಬೇಕಾಗಿದೆ. ದೊಡ್ಡ ಉದ್ಯಮಗಳನ್ನು ಆಧರಿಸಿ ಎಂಎಸ್‌ಎಂಇ ಕಾರ್ಯನಿರ್ವಹಿಸುತ್ತದೆ. ದೊಡ್ಡ ಉದ್ಯಮಗಳು ಬಂದ್ ಆಗಿದ್ದು, ಆರಂಭಗೊಂಡರೂ ನಿರೀಕ್ಷಿತ ವೇಗದಲ್ಲಿ ಸಾಗುವ ಸಾಧ್ಯತೆ ಕಡಿಮೆ. ಯುರೋಪಿಯನ್ ದೇಶಗಳು ಹಾಗೂ ಅಮೆರಿಕ ಸೇರಿ ಇನ್ನಿತರ ದೇಶಗಳಿಗೆ ಕೆಲ ಎಂಎಸ್ ಎಂಇಗಳು ಉತ್ಪನ್ನ ರಫ್ತು ಮಾಡುತ್ತಿದ್ದವು. ಇದೀಗ ಸ್ಥಗಿತಗೊಂಡಿದೆ. ಇದ್ದ ಉದ್ಯೋಗಿಗಳನ್ನು ಉಳಿಸಿಕೊಳ್ಳಬೇಕು, ಕನಿಷ್ಟ ವೆಚ್ಚ-ಶುಲ್ಕಗಳನ್ನು ಭರಿಸಬೇಕು ಎಂದರೆ ಹೇಗೆ ಸಾಧ್ಯ ಎಂಬುದು ಹಲವು ಉದ್ಯಮಿಗಳ ಪ್ರಶ್ನೆ.
Related Articles
Advertisement
ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ ವರೆಗೆ ಉದ್ಯಮದ ಕಾರ್ಯಗಳು ಹೆಚ್ಚುತ್ತಿರುತ್ತವೆ. ವಿದ್ಯುತ್ ಬಳಕೆಯೂ ಹೆಚ್ಚಾಗಿರುತ್ತದೆ. ಈ ಅವಧಿ ಬಳಕೆಯನ್ನು ಪರಿಗಣಿಸಿ ವಿದ್ಯುತ್ ಕಂಪನಿಯವರು ಮೂರು ತಿಂಗಳ ಸರಾಸರಿ ಬಿಲ್‌ಗಳನ್ನು ಪಡೆದುಕೊಂಡಿವೆ. ಉದ್ಯಮ ಸ್ಥಗಿತಗೊಂಡಿದ್ದರೂ ನಾವು ಹಿಂದೆ ಬಳಕೆ ಮಾಡಿದ ಪ್ರಮಾಣದಷ್ಟೇ ವಿದ್ಯುತ್ ಶುಲ್ಕ ಪಾವತಿಸಿದ್ದೇವೆ. ಮುಂದೆ ನಮಗೆ ಅದು ಬರಬಹುದು. ಆದರೆ, ಈ ಸಂಕಷ್ಟ ಸ್ಥಿತಿಯಲ್ಲಿ ಅದನ್ನು ಪಾವತಿಸಬೇಕಲ್ಲ ಎಂಬುದು ಉದ್ಯಮದಾರರ ಅಳಲು.
ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬೀದರ, ಬಳ್ಳಾರಿಗಳಲ್ಲಿ ಉದ್ಯಮ ವಲಯ ಬೆಳೆಯುತ್ತಿದೆ. ವಿಶೇಷವಾಗಿ ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಆಧಾರಿತ ಎಂಎಸ್‌ಎಂಇ ಇದ್ದರೆ, ಬೆಳಗಾವಿಯಲ್ಲಿ ಹೈಡ್ರೋಲಿಕ್ ಹಾಗೂ ಏರೋಸ್ಪೇಸ್ ಉದ್ಯಮ ಇದೆ. ಕಲಬುರಗಿಯಲ್ಲಿಕೃಷಿಯಾಧಾರಿತ ಉದ್ಯಮಗಳಿದ್ದರೆ, ಬಳ್ಳಾರಿಯಲ್ಲಿ ಜೀನ್ಸ್ ಇನ್ನಿತರ ಉದ್ಯಮ ಇದೆ. ಈ ಎಲ್ಲ ಎಂಎಸ್‌ಎಂಇಗಳು ದೊಡ್ಡ ಉದ್ಯಮಗಳು, ಮಾರುಕಟ್ಟೆಯನ್ನು ನಂಬಿಕೊಂಡು ಸಾಗುತ್ತವೆ. ಆದರೆ, ದೊಡ್ಡ ಉದ್ಯಮ, ಮಾರುಕಟ್ಟೆಯೇ ಇಲ್ಲವಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿವೆ.
ಲಾಕ್‌ಡೌನ್‌ನಿಂದಾಗಿ ಎಂಎಸ್‌ಎಂಇ ಸಂಕಷ್ಟಕ್ಕೆ ಸಿಲುಕಿದೆ. ಪುನಶ್ಚೇತನಕ್ಕೆ ಕನಿಷ್ಟ 3 ವರ್ಷವಾದರೂ ಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ವಿಶೇಷ ನೆರವಿಗೆ ಮುಂದಾಗುವುದು ಅವಶ್ಯ. ನೌಕರರಿಗೆ ನೀಡಿದ ವೇತನದಲ್ಲಿ ಕನಿಷ್ಟ ಎರಡು ತಿಂಗಳ ವೆಚ್ಚವನ್ನಾದರೂ ಸರ್ಕಾರ ಭರಿಸುವ ಬಗ್ಗೆ ಚಿಂತಿಸಲಿ. –ಎಂ.ಸಿ.ಹಿರೇಮಠ, ಮಾಜಿ ಅಧ್ಯಕ್ಷ, ಕೆಸಿಸಿಐ
–ಅಮರೇಗೌಡ ಗೋನವಾರ