Advertisement
ಪದವಿ ವಿಭಾಗದಲ್ಲಿ ಪರೀಕ್ಷೆ ಆಗಿ ಹಲವು ತಿಂಗಳು ಕಳೆದರೂ ಫಲಿತಾಂಶ ವಿಳಂಬದಿಂದ ಸುದ್ದಿಯಲ್ಲಿರುವ ಮಂಗಳೂರು ವಿ.ವಿ.ಯು ಸ್ನಾತಕೋತ್ತರ ವಿಭಾಗದಲ್ಲಿಯೂ ಈ ಸಮಸ್ಯೆ ಯಿಂದ ಹೊರತಾಗಿಲ್ಲ. ಉಳಿದ ವಿಷಯಗಳ ಫಲಿತಾಂಶ ಪ್ರಕಟವಾಗಿದ್ದು, ಭೌತಶಾಸ್ತ್ರ ವಿದ್ಯಾರ್ಥಿಗಳು ಮಾತ್ರ ಸಮಸ್ಯೆಗೆ ಸಿಲುಕಿದ್ದಾರೆ.
ಸ್ನಾತಕೋತ್ತರ ವಿಭಾಗವು 2 ವರ್ಷಗಳಲ್ಲಿ ತಲಾ 2ರಂತೆ ಒಟ್ಟು 4 ಸೆಮಿಸ್ಟರ್‌ಗಳನ್ನು ಒಳಗೊಂಡಿದೆ. ಎಂಎಂಸ್ಸಿ ಭೌತಶಾಸ್ತ್ರದ 4ನೇ ಸೆಮಿಸ್ಟರ್ ಪರೀಕ್ಷೆಯು 2022ರ ಸೆಪ್ಟಂಬರ್‌ನಲ್ಲಿ ನಡೆದಿತ್ತು. ಅಂತಿಮ ಹಂತದ ಪರೀಕ್ಷೆ ಇದಾಗಿದ್ದು, ಬಳಿಕ ಮುಂದಿನ ಶಿಕ್ಷಣ/ ಉದ್ಯೋಗದತ್ತ ತೆರಳಲು ಸಾಧ್ಯವಾಗುತ್ತದೆ. ಆದರೆ ಪರೀಕ್ಷೆ ಬರೆದು ನಾಲ್ಕು ತಿಂಗಳು ಕಳೆದರೂ ಫಲಿತಾಂಶ ಬಂದಿಲ್ಲ. ಪಿಎಚ್‌ಡಿಗೆ ಸಮಸ್ಯೆ
ಫಲಿತಾಂಶ ಬಾರದೆ ಹೊರ ಜಿಲ್ಲೆ, ರಾಜ್ಯಗಳಲ್ಲಿನ ವಿ.ವಿ., ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಸೇರ್ಪಡೆಗೊಳ್ಳಲು ಸಾಧ್ಯವಾಗುತ್ತಿಲ್ಲ. ಸೇರ್ಪಡೆಗೆ ಫಲಿತಾಂಶದ ಅಂಕಪಟ್ಟಿ ಸಿಗದಿದ್ದರೂ ಕನಿಷ್ಠ ಆನ್‌ಲೈನ್ ಪ್ರತಿಯನ್ನಾದರೂ ಲಗತ್ತಿಸಬೇಕಿದೆ. ರಾಜ್ಯ ಅಥವಾ ಹೊರ ರಾಜ್ಯದ ಬೇರೆ-ಬೇರೆ ವಿ.ವಿ.ಗಳಲ್ಲಿ ಈಗಾಗಲೇ ಫಲಿತಾಂಶ ಪ್ರಕಟವಾಗಿರುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಧಿಸಿ ತಮ್ಮ ಇಚ್ಛಿತ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಂಗಳೂರು ವಿ.ವಿ. ವಿದ್ಯಾರ್ಥಿಗಳಿಗೆ ಈ ಅವಕಾಶ ಇಲ್ಲವಾಗಿದೆ. ಈಗಾಗಲೇ ನೆಟ್ ಎಕ್ಸಾಮ್ ಕ್ಲಿಯರ್ ಆದವರಿಗೂ ಕೂಡ ಸೆಮಿಸ್ಟರ್‌ನ ಅಂಕಪಟ್ಟಿ ಇಲ್ಲದ ಕಾರಣ ಸೇರ್ಪಡೆಗೆ ಅವಕಾಶ ಸಿಗುತಿಲ್ಲ. ಈ ತಿಂಗಳ ಒಳಗೆ ಫಲಿತಾಂಶ ಬಾರದಿದ್ದರೆ ಈ ವರ್ಷದ ಉತ್ತಮ ಅವಕಾಶಗಳು ಕೈ ತಪ್ಪಲಿದೆ ಅನ್ನುವುದು ವಿದ್ಯಾರ್ಥಿಗಳ ಅಳಲು. ಇದೇ ರೀತಿ ರಸಾಯನಶಾಸ್ತ್ರ ಮೊದಲ ಸೆಮಿಸ್ಟರ್ ಮತ್ತು ಭೌತಶಾಸ್ತ್ರ ಎರಡನೇ ಸೆಮಿಸ್ಟರ್‌ನ ಫಲಿತಾಂಶ ಕೂಡ ಬಂದಿಲ್ಲ.
Related Articles
ಫಲಿತಾಂಶ ವಿಳಂಬದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿ.ವಿ. ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಆರೋಪ. ಉನ್ನತ ಶಿಕ್ಷಣಕ್ಕಾಗಿ ಫಲಿತಾಂಶದ ಆವಶ್ಯಕತೆ ಇದ್ದರೂ ವಿ.ವಿ. ಮಾತ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
Advertisement
ಮೂರನೇ ವೌಲ್ಯಮಾಪನಕ್ಕೆ ಬಂದಿರುವ ಕಾರಣ ಅದನ್ನು ನಾವು ಬಾಹ್ಯ ಪರೀಕ್ಷಕರಿಂದ ಮಾಡಿಸಬೇಕು. ಆ ಕಾರಣಕ್ಕೆ ಫಲಿತಾಂಶ ವಿಳಂಬವಾಗಿದೆ. ಅದಾಗ್ಯೂ ಈಗಾಗಲೇ ಒಂದು ಡೆಡ್‌ಲೈನ್ ನೀಡಿದ್ದೇವೆ. 41ನೇ ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಆಗುವ ಹಾಗೆ ಫಲಿತಾಂಶ ಘೋಷಣೆ ಮಾಡುತ್ತೇವೆ.– ಪಿ.ಎಲ್. ಧರ್ಮ, ಪರೀಕ್ಷಾಂಗ ಕುಲಸಚಿವರು, ಮಂಗಳೂರು ವಿ.ವಿ.