ಬೆಂಗಳೂರು: ಖ್ಯಾತ ಕರ್ನಾಟಕ ಸಂಗೀತ ವಿದೂಷಿ ಎಂ.ಎಸ್.ಶೀಲಾ ಅವರಿಗೆ ಪ್ರತಿಷ್ಠಿತ 2018ರ ನಿರ್ಮಾಣ್- ಪುರಂದರ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇತೀ¤ಚೆಗೆ ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಿನ್ನದ ಸ್ಮರಣ ಫಲಕ, ಒಂದು ಲಕ್ಷದ ಒಂದು ರೂ. ನಗದು ಪುರಸ್ಕಾರ ಒಳಗೊಂಡ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಳೆದ ಎಂಟು ವರ್ಷಗಳಿಂದ ಖ್ಯಾತ ವಸತಿ ಸಂಸ್ಥೆ ನಿರ್ಮಾಣ್ ಶೆಲ್ಟರ್ಸ್ ಪ್ರತಿ ವರ್ಷ ಪುರಂದರ ದಾಸರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಸಂಗೀತ ವಿದ್ವಾಂಸರಿಗೆ ನೀಡುತ್ತಾ ಬಂದಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶೀಲಾ, ಈವರೆಗೆ ಬಂದ ಎಲ್ಲ ಪ್ರಶಸ್ತಿಗಳಿಗಿಂತ ಕರ್ನಾಟಕ ಸಂಗೀತದ ಪಿತಾಮಹ ಶ್ರೀಪುರಂದರ ದಾಸರ ಹೆಸರಿನ ಈ ಪ್ರಶಸ್ತಿ ಜೀವಮಾನದುದ್ದಕ್ಕೂ ಸಿಹಿ ನೆನಪಾಗಿ ಉಳಿಯಲಿದೆ. ಪುರಂದರ ದಾಸರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ನಿರ್ಮಾಣ್ ಸಂಸ್ಥೆಯ ಸಂಸ್ಥಾಪಕ ವಿ. ಲಕ್ಷಿನಾರಾಯಣ್ ಅವರ ಶ್ರಮ ಪ್ರಶಂಸನೀಯ ಎಂದರು.
ಕೆಂಪಯ್ಯ ಶ್ಲಾಘನೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಬಿಲ್ಡರ್‌ಗಳು, ಡೆವಲಪರ್‌ಗಳು ಎಂದರೆ ಮೂಗು ಮುರಿಯುವ ಇಂದಿನ ಸನ್ನಿವೇಶದಲ್ಲಿ ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆಯ ಮೂಲಕ ಸುಸಜ್ಜಿತ ಬಡಾವಣೆಗಳನ್ನು ನಿರ್ಮಿಸಿ ಜನರಿಗೆ ವಾಸಯೋಗ್ಯ ವಾತಾವರಣವನ್ನು ಕಲ್ಪಿಸಿರುವ ಲಕ್ಷಿನಾರಾಯಣ್ ಒಬ್ಬ ಆದರ್ಶಪ್ರಾಯ ವ್ಯಕ್ತಿ ಎಂದರು.
ಶ್ರೀಶ್ರೀ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಗೀತಕಲಾನಿಧಿ ಶ್ರೀ ವಿದ್ಯಾಭೂಷಣ, ಪೊ›. ಅಶ್ವತ್ಥನಾರಾಯಣ, ನಿರ್ಮಾಣ್ ಸಂಸ್ಥೆಯ ಸಂಸ್ಥಾಪಕ ವಿ. ಲಕ್ಷಿನಾರಾಯಣ್, ಸಿಇಒ ರವಿರಾಜ್‌ಭಟ್, ಶಂಕರಪ್ರಕಾಶ್, ಸುಷ್ಮ ಮೂರ್ತಿ ಇತರರು ಹಾಜರಿದ್ದರು.