ದುಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಂತ್ಯ ಕಂಡಿದೆ. ಸುಮಾರು ಆರು ತಿಂಗಳ ನಡುವೆ ಎರಡು ಚರಣದಲ್ಲಿ ನಡೆದ ಕೂಟದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಪ್ ಗೆದ್ದುಕೊಂಡಿದೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಎಸ್ ಕೆ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27 ರನ್ ಗಳಿಂದ ಸೋಲಿಸಿ ನಾಲ್ಕನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿತು. 300ನೇ ಪಂದ್ಯದಲ್ಲಿ ನಾಯಕತ್ವ ನಿಭಾಯಿಸಿದ ಮಹೇಂದ್ರ ಸಿಂಗ್ ಧೋನಿ ತಮ್ಮ ಪ್ರಶಸ್ತಿ ಪಟ್ಟಿಗೆ ಮತ್ತೊಂದು ಕಪ್ ಸೇರಿಸಿಕೊಂಡರು.
ಪಂದ್ಯದ ಬಳಿಕ ಧೋನಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದರು. ನಿರೂಪಕ ಹರ್ಷ ಭೋಗ್ಲೆ ಅವರು ಧೋನಿಗೆ ‘ನೀವು ಬಿಟ್ಟು ಹೋದ ಪರಂಪರೆಯ ಬಗ್ಗೆ ಬಹಳ ಹೆಮ್ಮೆ ಪಡುತ್ತೀರಿ” ಎಂದರು. ಇದಕ್ಕೆ ಧೋನಿ,” ಇನ್ನೂ ಎನನ್ನೂ ಬಿಟ್ಟು ನಡೆದಿಲ್ಲ” ಎಂದು ನಕ್ಕರು.
ಇದನ್ನೂ ಓದಿ:ಉಬೆರ್ ಕಪ್ ಬ್ಯಾಡ್ಮಿಂಟನ್ : ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ಭಾರತ
ಧೋನಿ ಈ ಸೀಸನ್ ಬಳಿಕ ವಿದಾಯ ಹೇಳುತ್ತಾರೆ ಎನ್ನುವ ಲೆಕ್ಕಾಚಾರಗಳನ್ನು ಧೋನಿ ತಮ್ಮದೇ ಸ್ಟೈಲ್ ನಲ್ಲಿ ಬದಿಗೆ ಸರಿಸಿದ್ದಾರೆ. ಆದರೆ ಸಿಎಸ್ ಕೆ ಪರವಾಗಿ ಆಡುವ ಬಗ್ಗೆ ಧೋನಿ ಇನ್ನೂ ಖಚಿತ ಪಡಿಸಿಲ್ಲ. ಈ ಬಗ್ಗೆ ಮಾತನಾಡಿದ ಮಾಹಿ, “ಮುಂದಿನ ಆವೃತ್ತಿಗೆ ಇನ್ನೆರಡು ತಂಡಗಳು ಸೇರ್ಪಡೆಯಾಗುವ ಕಾರಣ ಏನನ್ನೂ ಹೇಳಲಾಗದು. ನಾನು ಸಿಎಸ್ ಕೆ ಗೆ ಆಡುವುದಕ್ಕಿಂತ ಸಿಎಸ್ ಕೆ ಒಂದು ತಂಡವಾಗಿರುವುದು ಮುಖ್ಯ. ಭವಿಷ್ಯಕ್ಕೆ ಯಾವುದು ಮುಖ್ಯ ಎನ್ನುವುದನ್ನು ನೋಡಬೇಕಿದೆ” ಎಂದರು.