ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯ ಸೆಕ್ಟರ್ 10ರಲ್ಲಿನ ದ್ವಾರಕಾ ಸಮೀಪದ ವೆಲ್‌ಕಂ ಹೊಟೇಲ್‌ನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ಹೊಟೇಲಿನಲ್ಲಿ ತಂಗಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೂಡಲೇ ಸುರಕ್ಷಿತವಾಗಿ ಪಾರುಗೊಳಿಸಲಾಯಿತು.
ಬೆಳಗ್ಗೆ 6.30ರ ಹೊತ್ತಿಗೆ ಹೊಟೇಲಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಗ್ನಿ ಶಾಮಕ ದಳದವರಿಗೆ ಕೂಡಲೇ ತಿಳಿಸಲಾಯಿತು. ಸುಮಾರು 30 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬಂದವು. ಅಗ್ನಿ ಶಾಮಕಗಳ ಸಕಾಲಿಕ ಕಾರ್ಯಾಚರಣೆಯ ಫಲವಾಗಿ ಬೆಳಗ್ಗೆ 7.50ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಿಸಲಾಯಿತು.
ಈ ಅವಘಡದಲ್ಲಿ ಯಾವುದೇ ಜೀವ ಸಾನಿ ಸಂಭವಿಸಿಲ್ಲ; ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಜಾಖಂಡ್ ತಂಡದ ನಾಯಕತ್ವ ವಹಿಸಿರುವ ಧೋನಿ ಅವರು ವಿಜಯ್ ಹಜಾರೆ ಟ್ರೋಫಿಯ ಸೆಮಿ ಫೈನಲ್ ಪಂದ್ಯವನ್ನು ಆಡಲು ದಿಲ್ಲಿಗೆ ಬಂದಿದ್ದಾರೆ. ಧೋನಿ ಮತ್ತು ಅವರ ತಂಡದವರನ್ನು ಹೊಟೇಲಿನಲ್ಲಿ ಬೆಂಕಿ ಅಪಘಾತ ಸಂಭವಿಸಿದೊಡನಯೇ ಸುರಕ್ಷಿತವಾಗಿ ಪಾರುಗೊಳಿಸ ಲಾಯಿತಾದರೂ ಅವರ ಆಟದ ಕಿಟ್ ಮಾತ್ರ ಸುಟ್ಟು ಬೂದಿಯಾಗಿದೆ. ಈ ಪರಿಣಾಮವಾಗಿ ಕ್ರಿಕೆಟ್ ಪಂದ್ಯವನ್ನು ನಾಳೆಗೆ ಮುಂದೂಡಲಾಗಿದೆ.
ಇಲ್ಲಿನ ಪಾಲಂ ಕ್ರೀಡಾಂಗಣದಲ್ಲಿ ಮೊನ್ನೆ ಬುಧವಾರವಷ್ಟೇ ವಿದರ್ಭ ಕ್ರಿಕೆಟ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ್ದ ಧೋನಿ ತಂಡ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಸೆಮಿ ಫೈನಲ್ ತಲುಪಿತ್ತು.