ದುಬಾೖ: ಸತತ ಎರಡು ಅರ್ಧ ಶತಕಗಳ ಮೂಲಕ ಚೆನ್ನೈಗೆ ಗೆಲುವು ತಂದಿತ್ತು, ನಿರ್ಗಮನದ ವೇಳೆಯಲ್ಲೂ ತಂಡದ ಪ್ರತಿಷ್ಠೆಯನ್ನು ಹೆಚ್ಚಿಸಿದ ಋತುರಾಜ್ ಗಾಯಕ್ವಾಡ್ ಪ್ರತಿಭಾನ್ವಿತ ಕ್ರಿಕೆಟಿಗ ಎಂಬುದಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಶಂಸಿಸಿದ್ದಾರೆ.
“ಋತುರಾಜ್ ಅವಕಾಶವನ್ನು ಬಳಸಿಕೊಂಡ ಆಟಗಾರ. ಇಲ್ಲಿಗೆ ಬಂದಾಗ ನೆಟ್ಸ್‌ನಲ್ಲಿ ಅವರನ್ನು ಕಂಡಿದ್ದೆವು. ಆದರೆ ಅನಂತರ ಕೋವಿಡ್ ಪಾಸಿಟಿವ್ ಬಂದು 20 ದಿನ ದೂರ ಉಳಿದರು. ಹೀಗಾಗಿ ಅವರತ್ತ ನಮಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆದರೆ ಅವರ ಪಾಲಿಗೆ ಇದೊಂದು ಸ್ಮರಣೀಯ ಋತು” ಎಂಬುದಾಗಿ ಧೋನಿ ಹೇಳಿದರು.
ಈಗ ಮ್ಯಾಚ್ ವಿನ್ನರ್
“ಗಾಯಕ್ವಾಡ್ ಸಮಕಾಲೀನ ಕ್ರಿಕೆಟಿನ ಅತ್ಯಂತ ಪ್ರತಿಭಾನ್ವಿತ ಆಟಗಾರ. ಮಾತು ಕಡಿಮೆ. ಹೀಗಾಗಿ ಕೆಲವೊಮ್ಮೆ ಆಟಗಾರರನ್ನು, ಅವರ ಸಾಮರ್ಥ್ಯವನ್ನು ಅಂದಾಜಿಸುವುದು ತಂಡದ ಆಡಳಿತ ಮಂಡಳಿಗೆ ಕಷ್ಟವಾಗುತ್ತದೆ. ಇದೀಗ ಅವರು ನೈಜ ಆಟವನ್ನು ಪ್ರದರ್ಶಿಸತೊಡಗಿದ್ದಾರೆ. ಅವರದು ಸಂಪೂರ್ಣ ಯೋಜಿತ ಆಟ’ ಎಂದರು. ಜತೆಗೆ ಯುವ ಆಟಗಾರರ ಸಾಮರ್ಥ್ಯವನ್ನೂ ಧೋನಿ ಪ್ರಶಂಸಿಸಿದರು.
ಇದನ್ನೂ ಓದಿ:“ಸೂರ್ಯ ಟೀಮ್ ಇಂಡಿಯಾದಲ್ಲಿ ಇರಬೇಕಿತ್ತು’
ಮಹಾರಾಷ್ಟ್ರದ ಋತುರಾಜ್ ದಶರಥ್ ಗಾಯಕ್ವಾಡ್ ಐಪಿಎಲ್ ಆರಂಭದಲ್ಲಿ ಭಾರೀ ವೈಫಲ್ಯ ಕಂಡಿದ್ದರು (0, 5. 0). ಇದೀಗ ಮ್ಯಾಚ್ ವಿನ್ನರ್ ಆಗಿ ರೂಪುಗೊಂಡಿದ್ದಾರೆ. ಅವರಿಗೆ ಉಜ್ವಲ ಭವಿಷ್ಯವಿದೆ ಎಂಬುದು ಚೆನ್ನೈಕಪ್ತಾನನ ಅಭಿಪ್ರಾಯ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗಾಯಕ್ವಾಡ್ 53 ಎಸೆತಗಳಿಂದ 72 ರನ್ ಬಾರಿಸಿದರು (6 ಬೌಂಡರಿ, 2 ಸಿಕ್ಸರ್). ಅರ್ಹವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಜಡೇಜ ಆಟ ಅದ್ಭುತ
ರವೀಂದ್ರ ಜಡೇಜ ಆಟ ಅತ್ಯದ್ಭುತ ಎಂದೂ ಧೋನಿ ಗುಣಗಾನ ಮಾಡಿದರು. ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 5ಕ್ಕೆ 172 ರನ್ ಗಳಿಸಿದರೆ, ಚೆನ್ನೈ ಭರ್ತಿ 20 ಓವರ್‌ಗಳಲ್ಲಿ 4 ವಿಕೆಟಿಗೆ 178 ರನ್ ಬಾರಿಸಿ ತನ್ನ 5ನೇ ಗೆಲುವನ್ನು ಸಾರಿತು. ಜಡೇಜ ಅಂತಿಮ 2 ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿ ಜಯಭೇರಿ ಮೊಳಗಿಸಿದರು.