Advertisement
ಫ್ರಾಂಚೈಸಿಗಳು ವರ್ಷವೊಂದಕ್ಕೆ ಸಂಬಳಕ್ಕಾಗಿ ವ್ಯಯಿಸಬಹುದಾದ ಮೊತ್ತವನ್ನು 80 ಕೋಟಿ ರೂ.ಗೇರಿಸಲಾಗಿದೆ. ಆಟಗಾರರ ಮೂಲಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಇದೇ ವೇಳೆ ಐಪಿಎಲ್‌ನಲ್ಲಿ ದಿಢೀರ್ ಕಾಣಿಸಿಕೊಳ್ಳುವ, ಅಂತಾರಾಷ್ಟ್ರೀಯ ಕ್ರಿಕೆಟನ್ನೇ ಪ್ರವೇಶಿಸದ ಹೊಸ ಹುಡುಗರಿಗೆ ಸಂಬಳ ಮಿತಿ ನಿಗದಿ ಪಡಿಸಿ ಎಂದು ಧೋನಿ, ಕೊಹ್ಲಿ ಧ್ವನಿ ಎತ್ತಿದ್ದಾರೆ. ಇದನ್ನು ಬಿಸಿಸಿಐ ಸ್ವಾಗತಿಸಿದೆ.
Related Articles
ಅತ್ಯಂತ ಪ್ರಮುಖ ನಿರ್ಣಯ ಪ್ರತಿ ಫ್ರಾಂಚೈಸಿಯೂ ತನ್ನ ಐವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿರುವುದು. ಫ್ರಾಂಚೈಸಿಗಳು 8 ಮಂದಿಯನ್ನು ಉಳಿಸಿಕೊಳ್ಳಲು ಬಯಸಿದರೂ ಬಿಸಿಸಿಐ 5ಕ್ಕೆ ಮಾತ್ರ ಸಮ್ಮತಿಸಿದೆ. ಅಲ್ಲಿಗೆ ಮುಂದಿನ ವರ್ಷವೂ ಬಹುತೇಕ ತಂಡಗಳ ಮೂಲರಚನೆ ವ್ಯತ್ಯಾಸವಾಗುವುದಿಲ್ಲ. ಉದಾಹರಣೆಗೆ ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ, ಡಿವಿಲಿಯರ್ಸ್, ಕ್ರಿಸ್ ಗೇಲ್ ತಮ್ಮ ಸ್ಥಾನವನ್ನು ಹಾಗೆಯೇ ಉಳಿಸಿಕೊಳ್ಳಲಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಚೆನ್ನೈ ಮತ್ತು ರಾಜಸ್ಥಾನ್ ಕೂಡ 2014ರಲ್ಲಿ ತಾವು ಹೊಂದಿದ್ದ ತಂಡಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡಿರುವುದು (ಈ ತಂಡಗಳು 2015, 2016ರಂದು ನಿಷೇಧಕ್ಕೊಳಗಾಗಿದ್ದರಿಂದ ಇದರ ಆಟಗಾರರು ಗುಜರಾತ್, ಪುಣೆ ತಂಡಗಳಲ್ಲಿ ಹಂಚಿಹೋಗಿದ್ದರು).
Advertisement
ಧೋನಿ ಚೆನ್ನೈ ಪರ ಆಡುವುದು ಖಚಿತ2018ರಂದು ಧೋನಿ ಮತ್ತೆ ಚೆನ್ನೈ ಕಿಂಗ್ಸ್ ತಂಡದ ಪರ ಆಡುವುದು ಖಚಿತವಾಗಿದೆ. ಅವರು ಐಪಿಎಲ್‌ನ ಆರಂಭದ 8 ಆವೃತ್ತಿಗಳಲ್ಲಿ ಚೆನ್ನೈ ಪರ ಆಡಿದ್ದರು. ಆ ತಂಡ ಮಾಲಿಕರ ಬೆಟ್ಟಿಂಗ್ ಕಾರಣ 2 ವರ್ಷ ನಿಷೇಧಕ್ಕೊಳಗಾಗಿದ್ದರಿಂದ ಧೋನಿ ಪುಣೆ ಪರವಾಗಿ ಆಡಬೇಕಾಗಿ ಬಂದಿತ್ತು. ಇನ್ನೀಗ ತಮ್ಮ ತವರು ತಂಡ ಚೆನ್ನೈ ನೇತೃತ್ವ ವಹಿಸಿಕೊಳ್ಳುವುದೂ ಬಹುತೇಕ ಖಾತ್ರಿಯಾಗಿದೆ. ವೇತನ ಮಿತಿ 60 ಕೋಟಿ ರೂ.ನಿಂದ 80 ಕೋಟಿ ರೂ.ಗೆ
ಇದುವರೆಗೆ ಫ್ರಾಂಚೈಸಿಯೊಂದು ವಾರ್ಷಿಕ 60 ಕೋಟಿ ರೂ.ಗಳನ್ನು ಆಟಗಾರರ ವೇತನಕ್ಕಾಗಿ ವ್ಯಯಿಸುತ್ತಿತ್ತು. 2018ಕ್ಕೆ ಅದನ್ನು 80 ಕೋಟಿ ರೂ.ಗೇರಿಸಲಾಗಿದೆ. 2019, 20ಕ್ಕೆ ಕ್ರಮವಾಗಿ 82, 85 ಕೋಟಿ ರೂ.ಗೇರಿಸಲಾಗುವುದು. ಗಮನಿಸಬೇಕಾದ ಸಂಗತಿಯೆಂದರೆ ಫ್ರಾಂಚೈಸಿಗಳು ಇದರಲ್ಲಿ ಶೇ.75ರಷ್ಟು ಮೊತ್ತವನ್ನು ಖರ್ಚು ಮಾಡಲೇಬೇಕಾಗುತ್ತದೆ. ಅಗ್ರ ಮೂವರಿಗೆ 33 ಕೋಟಿ ರೂ.
ಫ್ರಾಂಚೈಸಿಗಳು ಉಳಿಸಿಕೊಳ್ಳುವ ಅಗ್ರ ಮೂವರು ಆಟಗಾರರಿಗೆ 33 ಕೋಟಿ ರೂ. ವ್ಯಯಿಸಲು ಅವಕಾಶ ನೀಡಲಾಗಿದೆ. ಮೊದಲ ಆದ್ಯತೆಯ ಆಟಗಾರ 15 ಕೋಟಿ ರೂ., 2ನೇ ಆದ್ಯತೆ ಆಟಗಾರ 11 ಕೋಟಿ ರೂ., 3ನೇ ಆದ್ಯತೆ ಆಟಗಾರ 7 ಕೋಟಿ ರೂ. ಪಡೆಯಲಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ಈ ಮೊತ್ತ ಕ್ರಮವಾಗಿ 12.5 ಕೋಟಿ ರೂ., 9.5 ಕೋಟಿ ರೂ., 7.5 ಕೋಟಿ ರೂ. ಇತ್ತು. ಒಂದು ವೇಳೆ ಫ್ರಾಂಚೈಸಿಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಆಟಗಾರನನ್ನು ಉಳಿಸಿಕೊಂಡರೆ ಆತನಿಗೆ ಗರಿಷ್ಠ 3 ಕೋಟಿ ರೂ. ಮಾತ್ರ ವೇತನ ನೀಡಲು ನಿರ್ದೇಶಿಸಲಾಗಿದೆ. ಆಟಗಾರರ ಮೂಲಬೆಲೆಯಲ್ಲಿ ಹೆಚ್ಚಳ
ಆಟಗಾರರ ಮೂಲಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಆಟಗಾರನ ಮೂಲಬೆಲೆ ಈ ಹಿಂದೆ 30 ಲಕ್ಷ ರೂ. ಇದ್ದಿದ್ದು ಈಗ 40 ಲಕ್ಷ ರೂ.ಗೆ ಏರಿಕೆಯಾಗಿದೆ. 30 ಲಕ್ಷ ರೂ. ಮತ್ತು 40 ಲಕ್ಷ ರೂ. ಮೂಲಬೆಲೆ ಹೊಂದಿರುವ ಅಂತಾರಾಷ್ಟ್ರೀಯ ಆಟಗಾರರ ಬೆಲೆ ಈಗ ಕ್ರಮವಾಗಿ 50 ಮತ್ತು 75 ಲಕ್ಷ ರೂ.ಗೇರಲಿದೆ. ಹರಾಜು ವೇಳೆ ಈ ಮೊತ್ತದಿಂದಲೇ ಆಟಗಾರರ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಫ್ರಾಂಚೈಸಿಗಳ ಪೈಪೋಟಿ ಮೇರೆಗೆ ಈ ಬೆಲೆ ಹೆಚ್ಚಲಿದೆ. ರೈಟ್ ಟು ಮ್ಯಾಚ್ ಕಾರ್ಡ್‌ಗೆ ಅವಕಾಶ
ಫ್ರಾಂಚೈಸಿಗಳ ಒತ್ತಾಯದ ಮೇರೆಗೆ ಫ್ರಾಂಚೈಸಿಗಳಿಗೆ ರೈಟ್ ಟು ಮ್ಯಾಚ್‌ಕಾರ್ಡ್‌ಗೆ ಅವಕಾಶ ನೀಡಲಾಗಿದೆ. ಅಂದರೆ ಹಿಂದಿನ ಬಾರಿ ಬೇರೊಂದು ತಂಡದಲ್ಲಿದ್ದ ಆಟಗಾರ ಈ ಬಾರಿ ಹರಾಜಿನಲ್ಲಿ ಮತ್ತೂಂದು ತಂಡಕ್ಕೆ 10 ಕೋಟಿ ರೂ.ಗೆ ಮಾರಾಟವಾಗುತ್ತಾನೆ ಎಂದಿಟ್ಟುಕೊಳ್ಳೋಣ. ಆಗ ಆಟಗಾರ ಹಿಂದೆ ಆಡಿದ್ದ ಫ್ರಾಂಚೈಸಿಗೆ ನೀವು ಈತನನ್ನು ಉಳಿಸಿಕೊಳ್ಳಲು ಬಯಸುತ್ತೀರಾ ಎಂದು ಹರಾಜಿನ ವೇಳೆ ಕೇಳಲಾಗುತ್ತದೆ. ಫ್ರಾಂಚೈಸಿ ಸಮ್ಮತಿಸಿದರೆ ಹರಾಜಿನಲ್ಲಿ ನಿಗದಿಯಾಗಿರುವ ಮೊತ್ತ ನೀಡಿ ಆಟಗಾರನನ್ನು ಖರೀದಿಸಬಹುದು. ಪ್ರತಿ ಫ್ರಾಂಚೈಸಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳುತ್ತದೆ ಎನ್ನುವುದರ ಮೇಲೆ ರೈಟ್ ಟು ಮ್ಯಾಚ್‌ಕಾರ್ಡ್ ಮೂಲಕ ಎಷ್ಟು ಮಂದಿಯನ್ನು ಖರೀದಿಸಬಹುದು ಎಂಬುದು ನಿರ್ಧಾರವಾಗುತ್ತದೆ. ಹೊಸಬರಿಗೆ ವೇತನ ಮಿತಿಗೆ ಆಗ್ರಹ: ಬಿಸಿಸಿಐ ಸ್ವಾಗತ
ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟನ್ನೇ ಆಡದ ಹೊಸ ಹುಡುಗರು ಐಪಿಎಲ್‌ಗೆ ಆಯ್ಕೆಯಾಗಿ ಕೋಟ್ಯಂತರ ರೂ. ಸಂಪಾದಿಸುತ್ತಾರೆ. ಅವರು ರಣಜಿಯಲ್ಲೂ ಆಡಿರುವುದಿಲ್ಲ. ಅದೇ ವರ್ಷಪೂರ್ತಿ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಆಟಗಾರರು 10, 12 ಲಕ್ಷ ರೂ. ಗಳಿಸುವುದರಲ್ಲೇ ಇರುತ್ತಾರೆ. ಈ ತಾರತಮ್ಯ ಹೋಗಲಾಡಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿಲ್ಲದ ಆಟಗಾರರಿಗೆ ಐಪಿಎಲ್‌ನಲ್ಲಿ ವೇತನ ಮಿತಿ ನಿಗದಿ ಪಡಿಸಿ ಎಂದು ಕೊಹ್ಲಿ, ಧೋನಿ ಆಗ್ರಹಿಸಿದ್ದಾರೆ. ಇದು ರಚನಾತ್ಮಕ ಆಗ್ರಹ ಎಂದು ಬಿಸಿಸಿಐ ಕೂಡ ಒಪ್ಪಿಕೊಂಡಿದೆ.