ನವದೆಹಲಿ: ಐಪಿಎಲ್ ಗೆ ದಿನಗಣನೆ ಬಾಕಿ ಉಳಿದಿದೆ. ಅಮೋಘ ಟಿ-20 ಆಟದ ಥ್ರಿಲ್ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಮಾ.31 ರಿಂದ ಮೆಗಾ ಕ್ರಿಕೆಟ್ ಸುಗ್ಗಿ ಆರಂಭಗೊಳ್ಳಲಿದೆ.
ಈ ಬಾರಿಯ ಐಪಿಎಲ್ ಒಂದು ರೀತಿಯಲ್ಲಿ ಖುಷಿಯೂ ಹೌದು ಬೇಜಾರೂ ಹೌದು. ಕಾರಣ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ನಂತಹ ಸ್ಟಾರ್ ಆಟಗಾರರು ಇಲ್ಲದೆ ಇರುವುದು. ಇನ್ನೊಂದೆಡೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ಮತ್ತೆ ಮೈದಾನದಲ್ಲಿ ನೋಡಲಿದ್ದೇವೆ ಎನ್ನುವ ಖುಷಿ ಒಂದೆಡೆಯಾದರೆ ಇದು ಧೋನಿ ಅವರ ಕೊನೆಯ ಐಪಿಎಲ್ ಎನ್ನುವ ಬೇಜಾರು ಕೂಡ ಇದೆ.
ಕಳೆದ ಬಾರಿಯೇ ಧೋನಿ ಕೊನೆಯದಾಗಿ ಐಪಿಎಲ್ ಆಡುವವರಿದ್ದರು ಆದರೆ ತಮ್ಮ ಕೊನೆಯ ಪಂದ್ಯ ತವರಿನ ಅಂಗಳದಲ್ಲಿ ಆಗಲಿ ಎನ್ನುವುದು ಧೋನಿ ಅವರ ಆಸೆ ಆಗಿತ್ತು. ಧೋನಿ ಈಗಲೂ ಫಿಟ್ ಆಗಿದ್ದಾರೆ. ಅವರು ಇನ್ನು ಒಂದಷ್ಟು ವರ್ಷ ಕ್ರಿಕೆಟ್ ಆಡಬಹುದು.. ಹೀಗೆ ಹೇಳಿದ್ದು ಆಸೀಸ್ ನ ಸ್ಫೋಟಕ ಆಟಗಾರ, ಚೆನ್ನೈ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್.
“ಇದು ಧೋನಿ ಅವರ ಕೊನೆಯ ಐಪಿಎಲ್ ಎಂದು ನಾನು ಕೇಳುತ್ತಿದ್ದೇನೆ. ಆದರೆ ನನಗೆ ಹಾಗೆ ಅನ್ನಿಸುತ್ತಿಲ್ಲ. ಧೋನಿ ಈಗಲೂ ತುಂಬಾ ಫಿಟ್ ಆಗಿದ್ದಾರೆ ಅವರು ಇನ್ನೂ ಮೂರು – ನಾಲ್ಕು ವರ್ಷ ಆಡಬಹುದು. ಧೋನಿ ಅವರ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಈಗಲೂ ಮೊದಲಿನಂತೆಯೇ ಇದೆ. ಅವರ ಆಟದಂತೆ ಅವರ ನಾಯಕತ್ವವೂ ಉತ್ತಮವಾಗಿದೆ. ಮೈದಾನದಲ್ಲಿ ಅವರ ಆಟದ ಕೌಶಲ್ಯ ಅದ್ಭುತವಾಗಿದೆ. ಚೆನ್ನೈ ತಂಡದ ಯಶಸ್ವಿಗೆ ಧೋನಿ ಅವರೇ ಮುಖ್ಯ ಕಾರಣ” ಎಂದು ಹೇಳಿದರು.
ಎಂ.ಎಸ್.ಧೋನಿ ಅವರ ಚೆನ್ನೈ ತಂಡ ಮಾ. 31 ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.