Advertisement

ಆಶೀರ್ವದಿಸುವ ಭಂಗಿಯ ಗಣಪನ ಮೂರ್ತಿ ಪ್ರತಿಷ್ಠಾಪನೆ

04:39 PM Sep 13, 2018 | |

ರಾಮನಗರ: ವರ್ಷದಿಂದ ವರ್ಷಕ್ಕೆ ವೈವಿದ್ಯಮಯವಾಗಿ ಗಣೇಶ ಚತುರ್ಥಿ ಯನ್ನು ಆಚರಿಸುತ್ತಿರುವ ನಗರದ ಛತ್ರದ ಬೀದಿಯ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳಿಕಟ್ಟೆ ಗೆಳೆಯರ ಬಳಗ ಈ ಬಾರಿ ಆನೆಯ (ಗಜ) ನೈಜ ಸ್ವರೂಪದ ಮುಖವನ್ನು ಹೊತ್ತಿರುವ ಆಶೀರ್ವಾದ ನೀಡುವ ಭಂಗಿಯಲ್ಲಿರುವ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ.

Advertisement

ಶ್ರೀ ಗಜವದನ ಗಣಪತಿ ಎಂದು ನಾಮಕರಣ ಮಾಡಿರುವ ಸಂಘದ ಸದಸ್ಯರು, ಕಳೆದ 34 ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷವೂ ವೈವಿದ್ಯಮಯ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ತಾಲೂಕು ಅಲ್ಲದೆ ಜಿಲ್ಲಾದ್ಯಂತ ಖ್ಯಾತಿಗೊಂಡಿದೆ.

 ಕುಂಚ ಕಲಾವಿದನ ಕಲ್ಪನೆ ಸಾಕಾರ: ಈಶ್ವರ ತನ್ನ ಕಂದನ ಶಿರಚ್ಛೇದನ ಮಾಡಿದ ನಂತರ ಆನೆಯ ಶಿರ ಜೋಡಿಸಿ ಜೀವ ತುಂಬಿದ ಪುರಾಣದ ಕಥೆ ಗೊತ್ತೆ ಇದೆ. ಆದರೆ ಇಷ್ಟು ದಿನ ಆನೆಯ ನೈಜ ಮುಖ ಹೊತ್ತ ಗಣಪನ ದರ್ಶನ ಬಹುಶಃ ಆಗಿರಲೇ ಇಲ್ಲ!

ಆನೆಯ ಸೊಂಡಲಿರುವ ಸುಂದರ ವದನದ ಗಣಪನನ್ನು ನೋಡುತ್ತಿದ್ದೆವು. ಸಂಘದ ಸದಸ್ಯರು ಪ್ರತಿ ವರ್ಷ ವೈವಿಧ್ಯಮಯ ಗಣಪನನ್ನು ಪ್ರತಿಷ್ಠಾಪಿಸುವ ಕನಸಿಗೆ ನೀರೆಯುತ್ತಿದ್ದದ್ದು ಕುಂಚ ಕಲಾವಿದ ಹನುಮಂತು.
 
ಈ ಬಾರಿಯೂ ವಿಶಿಷ್ಟ ರೂಪದ ಗಣಪನನ್ನು ಕೂರಿಸುವ ಆಕಾಂಕ್ಷೆ ಹೊಂದಿದ್ದ ಆಯೋಜಕರಿಗೆ ಕುಂಚ ಕಲಾವಿದ ಹನುಮಂತು ತನ್ನ ಕಲ್ಪನೆಯಲ್ಲಿ ತಳೆದ ಗಜ (ಆನೆ) ವದನ (ಮುಖ)ಗಣಪತಿಯ ವಿಚಾರ ಮುಂದಿಟ್ಟರು. ಆಯೋಜಕರು ಈ ಚಿತ್ರವನ್ನು ನೇರವಾಗಿ ಒಯ್ದಿದ್ದು ಮಾಗಡಿಯ ಶಿಲ್ಪ ಕಲಾವಿದ ಉಮೇಶಂಕರ್‌ ಬಳಿಗೆ.

ಸವಾಲಾಗಿ ಸ್ವೀಕಾರ: ಮಣ್ಣಿನ ಗಣಪತಿ ರಚನೆಯಲ್ಲಿ ನಿಷ್ಣಾತರಾಗಿರುವ ಹಲವಾರು ದಶಕಗಳಿಂದ ವಿವಿಧ ರೂಪದ ಗಣಪನ ಮೂರ್ತಿಗಳನ್ನು ರಚಿಸಿರುವ ಉಮಾಶಂಕರ್‌ ಕುಂಚ ಕಲಾವಿದನ ಕಲ್ಪನೆಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯೂ ಆಗಿದ್ದಾರೆ. 

Advertisement

ಈ ಸಾಲಿನ ಗಣೇಶ ಹಬ್ಬದ ಆಚರಣೆ ಕುರಿತು ಸಂಘದ ಅಧ್ಯಕ್ಷ ಪಿ.ವೈ.ರವೀಂದ್ರ ಹೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಆನೆಯ ನೈಜ ಮುಖವನ್ನು ಹೊತ್ತ ಗಣಪನನ್ನು ಪ್ರತಿಷ್ಠಾ ಪಿಸುತ್ತಿರುವುದಾಗಿ ತಿಳಿಸಿದ್ದಾರೆ. ಶ್ರೀ ಗಜವದನ ಗಣಪತಿಯನ್ನು ವಿಶೇಷ ಆಸ್ಥಾನ ಮಂಟಪ ದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು. ಈ ಬಾರಿಯ ಗಜವದನ ಗಣಪನ ಪ್ರತಿಷ್ಠಾಪನೆಗೆ ಚಿತ್ರ ಕಲಾವಿದ ಹನುಮಂತು ನೇತೃತ್ವದಲ್ಲಿ ವಿಶೇಷ ಮಂಟಪ ವಿನ್ಯಾಸಗೊಳಿಸಲಾಗಿದೆ.
 
ಗಜವದನ ಗಣಪತಿಯನ್ನು ಮನೋಜ್ಞವಾಗಿ ರೂಪಿಸುವ ಮೂಲಕ ಮಾಗಡಿಯ ಉಮಾ ಶಂಕರ್‌ ತಮ್ಮ ಕಲಾ ನೈಪುಣ್ಯವನ್ನು ಪ್ರಕಟಸಿದ್ದಾರೆ ಎಂದು ತಿಳಿಸಿದರು. ಗಣೇಶೋತ್ಸವವು ಸೆ.13ರಿಂದ 30ರವರೆಗೆ ನಡೆಯಲಿದ್ದು, ನಿತ್ಯ ವಿಶೇಷ ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ ನೆರವೇರಲಿದೆ. ಗಣೇಶೋತ್ಸವವನ್ನು ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆ ವಹಿಸುವರು, ಅಲ್ಲದೆ ಜಿಲ್ಲೆಯ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪಿ.ವೈ.ರವೀಂದ್ರ ಹೇಳೆì ವಿವರಿಸಿದರು. ಸಂಘದ ಗೌರವಾಧ್ಯಕ್ಷ ಕೆ.ಆರ್‌.ನಾಗೇಶ್‌, ಪ್ರಧಾನ ಕಾರ್ಯದರ್ಶಿ ಉಮಾ ಮಹಾ ದೇವಪ್ಪ, ಸಂಚಾಲಕ ಆಟೋರಾಜು, ಪದಾಧಿಕಾರಿಗಳಾದ ಲೋಹಿತ್‌, ಪ್ರಕಾಶ್‌, ಪ್ರಶಾಂತ್‌, ಶಾಂತಕುಮಾರ್‌, ಪ್ರದೀಪ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next