Advertisement

ಪೆಟ್ರೋಲ್‌ಗೆ ಎಥನಾಲ್‌ ಮಿಶ್ರಣ ಏರಿಕೆ ಗುರಿ; ಎಂಆರ್‌ಪಿಎಲ್‌ ಸ್ಥಾವರಕ್ಕೆ ವೇಗ

08:33 PM Jul 22, 2021 | Team Udayavani |

ಮಹಾನಗರ: ಗಗನಕ್ಕೇರು ತ್ತಿರುವ ಪೆಟ್ರೋಲ್‌ ಬೆಲೆ ತಡೆಯಲು ಭಾರತವು 2023-24ರೊಳಗೆ ಪೆಟ್ರೋಲ್‌ನಲ್ಲಿ ಎಥನಾಲ್‌ ಮಿಶ್ರಣ ಪ್ರಮಾಣವನ್ನು ಶೇ.20ಕ್ಕೇರಿಸಲು ಕೇಂದ್ರ ಸರಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಅತೀ ದೊಡ್ಡ ತೈಲ ಸಂಸ್ಕರಣೆ ಕಂಪೆನಿ ಎಂಆರ್‌ಪಿಎಲ್‌ (ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌) ನ 2ಜಿ ಎಥನಾಲ್‌ ಸ್ಥಾವರ ನಿರ್ಮಾಣ ಯೋಜನೆ ವೇಗ ಪಡೆದುಕೊಂಡಿದೆ.

Advertisement

ಹೆಚ್ಚುತ್ತಿರುವ ತೈಲ ಆಮದು ದರದ ಮಧ್ಯೆ ನವೀಕರಿಸಬಹುದಾದ ಇಂಧನ ವಾದ 2ಜಿ-ಎಥನಾಲ್‌ ಉತ್ಪಾದನೆಗೆ ಆದ್ಯತೆ ನೀಡುವುದು ಹೊಸ ಸ್ಥಾವರದ ಗುರಿ. ಹತ್ತಿ, ಮೆಕ್ಕೆ ಜೋಳದ ತ್ಯಾಜ್ಯವನ್ನು ಬಳಸಿಕೊಂಡು ಎಥನಾಲ್‌ ಇಂಧನ ತಯಾರಿಸಲಾಗುತ್ತದೆ.

ಎಥನಾಲ್‌ ಸ್ಥಾವರದ ಕೆಲಸಕ್ಕೆ ವೇಗ ನೀಡುವಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯದಿಂದ ಎಂಆರ್‌ಪಿಎಲ್‌ಗೆ ಈಗಾಗಲೇ ಸೂಚನೆ ಬಂದಿದೆ. ಹೀಗಾಗಿ, ಯೋಜನೆಯ ಡಿಪಿಆರ್‌ ಸಿದ್ಧಪಡಿಸ ಲಾಗಿದೆ. 2023ರ ವೇಳೆಗೆ ನೂತನ ಘಟಕ ಕಾರ್ಯಾರಂಭಿಸುವ ಸಾಧ್ಯತೆಯಿದೆ.

ದಾವಣಗೆರೆಯ ಹರಿಹರದಲ್ಲಿ ಇದಕ್ಕಾಗಿ 50 ಎಕ್ರೆ ಭೂಮಿಯನ್ನು ಗುರುತಿಸಿ ಎಂಆರ್‌ಪಿಎಲ್‌ಗೆ ಹಸ್ತಾಂತರ ವಾಗಿದೆ. ಒಟ್ಟು 60 ಕೆಎಲ್‌ಪಿಡಿ (ಪ್ರತಿ ದಿನ 60 ಕಿಲೋ ಲೀಟರ್‌) ಉತ್ಪಾದನ ಸಾಮರ್ಥ್ಯದ ಘಟಕ ಇಲ್ಲಿ ಸ್ಥಾಪನೆಗೊಳ್ಳಲಿದೆ. ಇದು ಪೂರ್ಣವಾದರೆ ರಾಜ್ಯದ ಮೊದಲ ಅತ್ಯಂತ ಸುಸಜ್ಜಿತ ಮಾದರಿಯ ಎಲ್ಲ ಸೌಕರ್ಯಗಳ ಬೃಹತ್‌ ಪ್ರಮಾಣದ ಎಥನಾಲ್‌ ಉತ್ಪಾದನ ಸ್ಥಾವರ ಇದಾಗಲಿದೆ.  ರಾಜ್ಯದಲ್ಲಿ ಸದ್ಯ ಒಟ್ಟು 85 ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ ಸುಮಾರು 68 ಚಾಲ್ತಿಯಲ್ಲಿವೆ. ಇದರಲ್ಲಿ 15 ಕಾರ್ಖಾನೆಗಳಲ್ಲಿ ಮಾತ್ರ ಎಥನಾಲ್‌ ಉತ್ಪಾದನೆ ಮಾಡಲಾಗುತ್ತಿದೆ. ಅಂದರೆ, ರಾಜ್ಯದಲ್ಲಿ 7.50 ಲಕ್ಷ ಲೀಟರ್‌ ಎಥನಾಲ್‌ ಉತ್ಪತ್ತಿಯಾಗುತ್ತಿದೆ. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿ, ಜೋಳ, ಗೋಧಿಯ ಬೆಳೆಯ ಆಧಾರದಲ್ಲಿ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಎಥನಾಲ್‌ ಉತ್ಪಾ ದನೆಗೆ ಎಂಆರ್‌ಪಿಎಲ್‌ ಮುಂದಾಗಿದೆ.

ಹರಿಹರದಲ್ಲಿ ಈಗಾಗಲೇ ಯೋಜನೆಯ ಸಾರ್ವಜನಿಕ ವಿಚಾರಣೆ ನಡೆದಿದೆ. ನೀರು, ವಿದ್ಯುತ್‌ ಲಭ್ಯವಿದೆ. ಎಥನಾಲ್‌ ಉತ್ಪಾದನೆಗೆ ಸಿನ್‌ ಗ್ಯಾಸ್‌ ಪ್ರೊಡಕ್ಷನ್‌ ತಾಂತ್ರಿಕತೆಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಇದರ ಪ್ರಕಾರ ಧಾನ್ಯಗಳ ಬಯೋಮಾಸ್‌ ಗ್ಯಾಸಿಫೈಯರ್‌ ಮೂಲಕ ಸಿನ್‌ ಗ್ಯಾಸ್‌(ಸಿಂಥೆಸಿಸ್‌ ಗ್ಯಾಸ್‌) ಉತ್ಪಾದಿಸಲಾಗುವುದು. ಅದನ್ನು ಸಂಸ್ಕರಿಸಿ, ಮೈಕ್ರೋಬ್‌ ಬಳಸಿ ಎಥನಾಲ್‌ ಆಗಿ ಪರಿವರ್ತಿಸಲಾಗುತ್ತದೆ. 60 ಕೆಎಲ್‌ಪಿಡಿ ಎಥನಾಲ್‌ ಉತ್ಪಾದಿಸುವುದಕ್ಕೆ ಪ್ರತಿದಿನ 250ರಿಂದ 300 ಟನ್‌ ಬೆಳೆ ತ್ಯಾಜ್ಯಗಳು ಬೇಕಾಗಬಹುದು. ಈ ಸ್ಥಾವರದ ಬೂದಿಯನ್ನೂ ಸಿಮೆಂಟ್‌ ಫ್ಯಾಕ್ಟರಿಗಳಿಗೆ ಬಳಸಿಕೊಳ್ಳಬಹುದು ಎಂಬುದು ಎಂಆರ್‌ಪಿಎಲ್‌ ಲೆಕ್ಕಾಚಾರ.

Advertisement

ಕಚ್ಚಾತೈಲ ಆಮದು ಕಡಿತ ಗುರಿ :

ಸಕ್ಕರೆ ಅಂಶವಿರುವ ಸಸ್ಯೋತ್ಪನ್ನಗಳಾದ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಗೋಧಿ, ಜೋಳ, ಮೆಕ್ಕೆ ಜೋಳ ಮತ್ತಿತರ ಬೆಳೆಗಳಿಂದ ಎಥನಾಲ್‌ ಉತ್ಪಾದನೆ ಮಾಡಬಹುದು. ಹತ್ತಿ, ಮೆಕ್ಕೆಜೋಳದ ತ್ಯಾಜ್ಯ ಸಾಕಷ್ಟು ಪ್ರಮಾಣದಲ್ಲಿ ಹರಿಹರದಲ್ಲಿ ಲಭ್ಯವಿದೆ. ಎಥನಾಲ್‌ ಬಳಕೆ ಅಧಿಕವಾದಂತೆ ಹೊರದೇಶದಿಂದ ಕಚ್ಚಾ ತೈಲ ಆಮದು ಪ್ರಮಾಣದಲ್ಲೂ ಕಡಿತವಾಗಬಹುದು ಎಂದು ಅಂದಾಜಿಸಲಾಗಿದ್ದು, ಇದರಿಂದ ತೈಲ ಬೆಲೆಯನ್ನು ನಿಯಂತ್ರಿಸಬಹುದು. ಪಂಜಾಬ್‌, ಹರಿಯಾಣ ಸಹಿತ ಕೆಲವು ಭಾಗಗಳಲ್ಲಿ ಬೆಳೆ ತೆಗೆದ ಅನಂತರ (ಗೋಧಿ ಸಹಿತ ಇತರ)ಉಳಿದ ಹುಲ್ಲನ್ನು ರೈತರಿಗೆ ತೆಗೆಯಲು ದುಬಾರಿ ವೆಚ್ಚವಾಗುತ್ತದೆ ಎಂಬ ಕಾರಣಕ್ಕಾಗಿ ಬೆಂಕಿ ಕೊಡುತ್ತಾರೆ. ಅಂದರೆ ರೈತರಿಗೆ 2ನೇ ಬೆಳೆ ತೆಗೆಯಲು ಹುಲ್ಲು ಕಟಾವು ಮಾಡಲೇಬೇಕಾಗುತ್ತದೆ. ಇದೀಗ 2ಜಿ ಎಥನಾಲ್‌ ಯೋಜನೆ ಕೈಗೊಳ್ಳುವ ಕಾರಣದಿಂದ ಆ ಹುಲ್ಲನ್ನು ಸಂಬಂಧಪಟ್ಟ ತೈಲ ರಿಫೈನರ್‌ಗಳು ಖರೀದಿಸಲಿದ್ದಾರೆ. ಟನ್‌ಗಟ್ಟಲೆ ಇಂತಹ ವಸ್ತುಗಳಿಂದ ಎಥನಾಲ್‌ ಉತ್ಪಾದನೆಗೆ ಸರಕಾರ ಮುಂದಾಗಿದೆ.

ಎಂಆರ್‌ಪಿಎಲ್‌ ವತಿಯಿಂದ 2ಜಿ ಎಥನಾಲ್‌ ಸ್ಥಾವರ ನಿರ್ಮಾಣ ಯೋಜನೆಗೆ ವೇಗ ನೀಡಲಾಗುತ್ತಿದೆ. ಈಗಾಗಲೇ ಹರಿಹರದಲ್ಲಿ ಜಾಗ ನಿಗದಿ ಮಾಡಲಾಗಿದ್ದು, ಪ್ರಕ್ರಿಯೆಗಳು ಆರಂಭವಾಗಿದೆ. ಈ ಮೂಲಕ ರಾಜ್ಯದ ಅತೀ ದೊಡ್ಡ ಎಥನಾಲ್‌ ಉತ್ಪಾದನ ಸ್ಥಾವರ ನಿರ್ಮಾಣವಾಗಲಿದೆ. ಈ ಮೂಲಕ ಮುಂದಿನ ದಿನದಲ್ಲಿ ಪೆಟ್ರೋಲ್‌ನಲ್ಲಿ ಎಥನಾಲ್‌ ಮಿಶ್ರಣ ಇನ್ನಷ್ಟು ಏರಿಕೆ ಮಾಡುವ ಉದ್ದೇಶವಿದೆ. ರುಡೋಲ್ಫ್ ನೊರೋನ್ಹಾ, ಮಹಾಪ್ರಬಂಧಕರು, ಕಾರ್ಪೊರೇಟ್‌ ಕಮ್ಯುನಿಕೇಶನ್‌-ಎಂಆರ್‌ಪಿಎಲ್‌

 

ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next