ಕೋಲ್ಕತಾ: ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ (95) ಭಾನುವಾರ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದಾಗಿ ಭಾನುವಾರ ಬೆಳಗ್ಗೆ 10.30 ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ. ಪುತ್ರ ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ. ಸಮಾಜದ ವಾಸ್ತವಗಳನ್ನು ತನ್ನ ಸಿನಿಮಾಗಳಲ್ಲಿ ಸೆರೆಹಿಡಿಯುವಲ್ಲಿ ಹೆಸರಾದ ಸೇನ್, ಹಲವು ರಾಷ್ಟ್ರೀಯ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದ್ದರು. ಭುವನ್ ಶೊಮೆ ಸಿನಿಮಾದ ಮೂಲಕ ಸಿನಿ ವೃತ್ತಿಗೆ ಕಾಲಿಟ್ಟ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದರು. 1982 ರಲ್ಲಿ ಇವರ ಖಾರಿಜ್ ಸಿನಿಮಾವು ಕೇನ್ಸ್ ಫಿಲಂ ಫೆಸ್ಟಿವಲ್‌ನಲ್ಲಿ ಜ್ಯೂರಿ ಪುರಸ್ಕಾರವನ್ನು ಪಡೆದಿತ್ತು. ಸುಮಾರು ಅರವತ್ತು ವರ್ಷಗಳವರೆಗೆ ಇವರ ಸಿನಿಮಾ ರಂಗದಲ್ಲಿ ಹಲವು ಮಹತ್ವದ ಸಾಧನೆ ಮಾಡಿದ್ದಾರೆ. ಬೆಂಗಾಲಿ ಹಾಗೂ ಹಿಂದಿ ಭಾಷೆಗಳೆರಡರಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಕೆಲವೇ ನಿದೇಶಕರಲ್ಲಿ ಇವರೂ ಒಬ್ಬರು. 70 ರ ದಶಕದ ಕೋಲ್ಕತಾವನ್ನು ಚಿತ್ರಿಸಿದ ಇಂಟರ್‌ವ್ಯೂ, ಕಲ್ಕತ್ತಾ 71, ಪದತಿಕ್ ಸಿನಿಮಾಗಳು ಅತ್ಯಂತ ಗಮನಾರ್ಹವಾದವು. ಸೇನ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಸೇನ್ ನಿಧನ ದುಃಖ ತಂದಿದೆ. ಇವರ ನಿಧನವು ಸಿನಿಮಾ ಕ್ಷೇತ್ರಕ್ಕೆ ಭಾರಿ ನಷ್ಟ ಉಂಟು ಮಾಡಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.