ಮಹಾಲಿಂಗಪುರ: ಮಹಾಲಿಂಗಪೂರ ತಾಲೂಕು ರಚನೆ ವಿಷಯದಲ್ಲಿ ಶಾಸಕ ಸಿದ್ದು ಸವದಿಯವರು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆಂದು ತಾಲೂಕು ಹೋರಾಟ ವೇದಿಕೆ ಕಾರ್ಯಾಧ್ಯಕ್ಷ ಧರೆಪ್ಪ ಸಾಂಗ್ಲೀಕರ ಕಿಡಿಕಾರಿದರು.
ತಾಲೂಕು ಹೋರಾಟ ವೇದಿಕೆಯಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ತಾಲೂಕು ಘೋಷಣೆ ಮಾಡದೇ, ಈಗ ಚುನಾವಣೆ ಆಯೋಗದ ಪರವಾನಗಿ ಕೇಳಿ ಘೋಷಿಸುತ್ತೇವೆ, ಪತ್ರ ನೀಡುತ್ತೇವೆಂಬ ಸುಳ್ಳು ಹೇಳಿಕೆ ಮೂಲಕ ಹೋರಾಟಗಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಮುಂದಿನ ಸರ್ಕಾರ ರಚನೆಯಾಗಿ ತಾಲೂಕು ಆಗುವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು. ಹೋರಾಟ ವೇದಿಕೆ ಮುಖಂಡ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ, ಹೋರಾಟ ಆರಂಭಿಸುವಾಗ ಶಾಸಕ ಸಿದ್ದು ಸವದಿಯವರಿಗೆ ಹೋರಾಟ ಕುರಿತು ತಿಳಿಸಿದಾಗ, ತಾಲೂಕು ಆಗದಿದ್ದರೆ ನಾನು ವೇದಿಕೆಗೆ ಬಂದು ನಿಮ್ಮೊಂದಿಗೆ ಹೋರಾಟಕ್ಕೆ ಕುಳಿತುಕೊಳ್ಳುತ್ತೇನೆ ಎಂದಿದ್ದರು. ಆದರೆ ಒಂದು ದಿನವೂ ಬಂದು ಕುಳಿತುಕೊಳ್ಳಲಿಲ್ಲ.
ನೆರೆಯ ಮೂಡಲಗಿ ತಾಲೂಕಿನ ಹೋರಾಟ ಸಮಯದಲ್ಲಿ ಬಾಲಚಂದ್ರ ಜಾರಕಿಹೊಳಿ ಕೇವಲ 38 ದಿನಗಳಲ್ಲಿ ತಾಲೂಕು ಆದೇಶ ಮಾಡಿಸಿಕೊಂಡು ಬಂದಿದ್ದರು. ಅವರಂತೆ ಇವರು ಸರ್ಕಾರ ಮಟ್ಟದಲ್ಲಿ ಹೆಚ್ಚಿನ ಪ್ರಭಾವ ಬೀರಿ ತಾಲೂಕು ಘೋಷಣೆ ಮಾಡಲಿಲ್ಲ ಎಂದು ಆರೋಪಿಸಿದರು.
ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಪ್ರತಿ ಬಾರಿಯೂ ಸಿಎಂ ಅವರನ್ನು ಭೇಟಿ ಮಾಡಿದಾಗ ಶೀಘ್ರದಲ್ಲೇ ಸಿಹಿಸುದ್ದಿ ನೀಡುತ್ತೇವೆಂಬ ಸುಳ್ಳು ಭರವಸೆ ನೀಡುತ್ತ ಕಾಲಹರಣ ಮಾಡಿದರು ಎಂದರು.
ಹೋರಾಟ ವೇದಿಕೆ ಖಜಾಂಚಿ ನಿಂಗಪ್ಪ ಬಾಳಿಕಾಯಿ ಮಾತನಾಡಿ, ಮಹಾಲಿಂಗಪುರ ತಾಲೂಕು ವಿಷಯದಲ್ಲಿ ಬಿಜೆಪಿ ಸರ್ಕಾರ ಮತ್ತು ತೇರದಾಳ ಶಾಸಕ ಸಿದ್ದು ಸವದಿ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು. ವಿರೇಶ ಆಸಂಗಿ, ಪರಪ್ಪ ಬ್ಯಾಕೂಡ, ಯಲ್ಲನಗೌಡ ಪಾಟೀಲ, ಎಸ್. ಎಂ.ಪಾಟೀಲ, ಅಲ್ಲಪ್ಪ ದಡ್ಡಿಮನಿ, ಸಿದ್ದು ಶಿರೋಳ, ಹಣಮಂತ ಜಮಾದಾರ, ನ್ಯಾಯವಾದಿಗಳಾದ ಎಂ.ಎಸ್. ಮನ್ನಯ್ಯನವರಮಠ, ಎಂ.ಕೆ.ಸಂಗನ್ನವರ, ಶಿವಲಿಂಗ ಟಿರ್ಕಿ, ಸುರೇಶ ಜೋಗನ್ನವರ, ರಾಜೇಂದ್ರ ಮಿರ್ಜಿ, ರಫಿಕ್ ಮಾಲದಾರ, ಶಿವಾನಂದ ಸೋರಗಾಂವಿ, ಮಲ್ಲಪ್ಪ ಮಿರ್ಜಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.