ನೈಟ್ ಪ್ಯಾಂಟ್, ಮಾಸಲು ಬಣ್ಣದ ಟೀ ಶರ್ಟ್, ತಲೆಗೊಂದು ಕ್ಯಾಪ್, ತಲೆತುಂಬಾ ಎಣ್ಣೆ ಕಾಣದ ಕೂದಲು ಮುಖ ತುಂಬಾ ಸಾಧು ಗಡ್ಡ, ಕಾಲಲ್ಲಿ ಸ್ಪೋರ್ಟ್ಸ್ ಶೂ… ಈ ರೀತಿಯಾಗಿ ಕಾಣಿಸಿಕೊಂಡ ಆ ವ್ಯಕ್ತಿಯ ಫೊಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಸೌಂಡ್ ಮಾಡುತ್ತಿದೆ.
ಇದು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಅವರು ನಟಿಸುತ್ತಿರುವ ಹೊಸ ಚಿತ್ರ ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ಅವರ ಪಾತ್ರದ ಒಂದು ಔಟ್ ಲುಕ್. 1994ರಲ್ಲಿ ತೆರೆಕಂಡ ಹಾಲಿವುಡ್ ನ ಹೆಸರಾಂತ ಚಿತ್ರ ‘ಫಾರೆಸ್ಟ್ ಗಂಪ್’ನಿಂದ ಸ್ಪೂರ್ತಿ ಪಡೆದು ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದಲ್ಲಿ ಆಮಿರ್ ಖಾನ್ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಫಾರೆಸ್ಟ್ ಗಂಪ್’ ಹಲವು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ಅದ್ವೈತ್ ಚಂದನ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಆಮೀರ್ ಅವರಿಗೆ ನಾಯಕಿಯಾಗಿ ಕರೀನಾ ಕಪೂರ್ ನಟಿಸುತ್ತಿದ್ದು ಇದೀಗ ಈ ಚಿತ್ರದ ಚಿತ್ರೀಕರಣ ಪಂಜಾಬ್ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ.
ಈ ಮೊದಲು ಆಮಿರ್ ಖಾನ್ ಅವರು ಪಗಡಿಯಲ್ಲಿದ್ದ ಫೊಟೋ ಒಂದು ಚಿತ್ರೀಕರಣ ಸ್ಥಳದಿಂದ ಹೊರಬಿದ್ದಿತ್ತು. ಇದೀಗ ಆಮೀರ್ ಅವರು ಪಕ್ಕಾ ಪರದೇಸಿ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
Related Articles
ಚಂಢೀಗಢದಲ್ಲಿ ಕೆಲವು ದಿನಗಳ ಶೂಟಿಂಗ್ ಬಳಿಕ ಇದೀಗ ರೂಪ್ ನಗರದಲ್ಲಿ ಈ ಚಿತ್ರದ ಚಿತ್ರೀಕರಣ ಸಾಗಿದೆ. ಇಲ್ಲಿನ ರೂಪ್ ನಗರ್ – ನೂರ್ ಪುರ್ ಬೇಢಿ ರಸ್ತೆಯಲ್ಲಿರುವ ಗರ್ ಭಾಗಾ ಗ್ರಾಮದಲ್ಲಿ ಸಟ್ಲೇಜ್ ನದೀ ಪಾತ್ರದಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಈ ಚಿತ್ರದಲ್ಲಿ ಯುವ ಛಡ್ಡಾ ಪಾತ್ರನಿರ್ವಹಣೆಗಾಗಿ ಆಮಿರ್ ಖಾನ್ ಅವರು ಸುಮಾರು 20 ಕಿಲೋ ದೇಹ ತೂಕವನ್ನು ಇಳಿಸಿಕೊಂಡಿದ್ದಾರೆ. ವಯಾಕಾಮ್ 18 ಮೋಷನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಾಲಿವುಡ್ ನ ಬಹುನಿರೀಕ್ಷಿತ ಈ ಚಿತ್ರ 2020ರ ಕ್ರಿಸ್ಮಸ್ ವೇಳೆಗೆ ತೆರೆ ಕಾಣಲಿದೆ.