Advertisement

Mr Modi, ರಾಜ್ಯದಲ್ಲಿ ನಿಮ್ಮ ಪಕ್ಷದ ದುರಾಡಳಿತ ಬಗ್ಗೆ ಮಾತನಾಡಿ: ಸಿಎಂ ಕಿಡಿ

01:23 AM Nov 02, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ರದ್ದತಿ ಬಗ್ಗೆ ವ್ಯಂಗ್ಯವಾಡಿರುವ ಪ್ರಧಾನಿ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, “ಕಾಂಗ್ರೆಸ್‌ನತ್ತ ಬೆರಳು ತೋರುವ ಮುನ್ನ ಕರ್ನಾಟಕದಲ್ಲಿ ಬಿಜೆಪಿ ಬಿಟ್ಟು ಹೋಗಿರುವ ದುರಂತ ಪರಂಪರೆಯತ್ತ ಒಮ್ಮೆ ಬಲವಾದ ದೃಷ್ಟಿ ಹಾಯಿಸಿ’ ಎಂದಿದ್ದಾರೆ.
ಟ್ವೀಟ್‌ ಮೂಲಕ ಪ್ರಧಾನಿಗೆ ತಿರುಗೇಟು ನೀಡಿರುವ ಅವರು, “ರಾಜ್ಯದ ಜನರಿಗೆ ನಾವು ನೀಡಿದ್ದ ಗ್ಯಾರಂಟಿಯನ್ನು ಯಶಸ್ವಿಯಾಗಿ ಈಡೇರಿಸುತ್ತಿದ್ದೇವೆ.

Advertisement

ಪಂಚ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಬಜೆಟ್‌ ನಿಗದಿಗೊಳಿಸಿ ಜಾರಿ ಮಾಡಲಾಗುತ್ತಿದೆ. ಇದರಿಂದ ಕರ್ನಾಟಕದ ಭವಿಷ್ಯ ನಿರ್ಮಾಣಕ್ಕೆ ಹೆಚ್ಚುವರಿ 52,903 ಕೋಟಿ ರೂ. ಬಂಡವಾಳ ವಿನಿಯೋಗಿಸಿದ್ದೇವೆ’ ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿಯ 40 ಪರ್ಸೆಂಟ್‌ ಕಮಿಷನ್‌ ಭ್ರಷ್ಟಾಚಾರದ ಪಿಡುಗಿನಿಂದ ಕರ್ನಾಟಕ ಪಾರಾಗಿದೆ. ಬಿಜೆಪಿ ನಮ್ಮ ಸಂಪನ್ಮೂಲಗಳನ್ನು ಬರಿದುಮಾಡಿ ಹೋಗಿದೆ. ಆದರೆ ನಾವು ಅದೇ 40 ಪರ್ಸೆಂಟನ್ನು ಜನರ ಅಭಿವೃದ್ಧಿಗೆ ಬಳಸುತ್ತಿದ್ದೇವೆ. ಆದರೆ ನಿಮ್ಮ ಸಾಧನೆ ಏನು? ಭ್ರಷ್ಟಾಚಾರವನ್ನು ಪೋಷಿಸಿ ಕರ್ನಾಟಕವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿರುವುದು ಮತ್ತು ನಿಮ್ಮ ವೈಫ‌ಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೆ ಅಪಪ್ರಚಾರವನ್ನು ಮಾತ್ರ ಮಾಡುವುದು ನಿಮ್ಮ ಹೆಚ್ಚುಗಾರಿಕೆಯೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮದು ಕೇವಲ ಕೆಟ್ಟ ಆಡಳಿತವಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯನ ಮೇಲೆ ನೀವು ಸಾಲದ ಹೊರೆ ಹಾಕುತ್ತಿದ್ದೀರಿ. ವ್ಯಂಗ್ಯವೆಂದರೆ ಕರ್ನಾಟಕವು ಒಕ್ಕೂಟ ವ್ಯವಸ್ಥೆಗೆ ಗಣನೀಯ ತೆರಿಗೆ ನೀಡುವಾಗ ಗ್ಯಾರಂಟಿ ಯೋಜನೆಗಳನ್ನು ವಿಫ‌ಲಗೊಳಿಸಲು ಕೇಂದ್ರ ಸರಕಾರವು ನಮ್ಮ ಹಕ್ಕಿನ ಪಾಲನ್ನು ಕೊಡದೆ ಅನ್ಯಾಯ ಮಾಡಿದೆ. ನಾವು ನೀಡುವ ಪ್ರತೀ ರೂಪಾಯಿಗೆ ಕೇವಲ 13 ಪೈಸೆಗಳನ್ನು ಮಾತ್ರ ಹಿಂತಿರುಗಿಸುತ್ತಿದ್ದೀರಿ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ನೀವು ನಡೆಸುವ ದಬ್ಟಾಳಿಕೆಯಾಗಿದೆ ಎಂದು ಸಿಎಂ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next