ಕೆಲವೊಮ್ಮೆ ಅದೃಷ್ಟ ಅನ್ನೋದು ಹುಡುಕಿ ಬಂದರೆ, ಅದು ಯಾರೇ ಆಗಿರಲಿ ಎತ್ತರೆತ್ತರಕ್ಕೆ ಹೋಗುತ್ತಲೇ ಇರುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಅದೃಷ್ಟದ ಹುಡುಗನ ಬಗ್ಗೆ. ಆ ಅದೃಷ್ಟದ ಹುಡುಗ ಬೇರಾರೂ ಅಲ್ಲ, ಮುಂದಿನ ವಾರ ಬಿಡುಗಡೆಗೆ ಸಜ್ಜಾಗಿರುವ “ಮಿಸ್ಟರ್ ಎಲ್ ಎಲ್‌ಬಿ’ ಚಿತ್ರದ ನಾಯಕ ಶಿಶಿರ್.
ಶಿಶಿರ್ “ಮಿ.ಎಲ್‌ಎಲ್.ಬಿ’ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿಕೊಟ್ಟವರು. ಆ ಚಿತ್ರವೀಗ ಮುಂದಿನ ವಾರ ಬಿಡುಗಡೆಗೆ ಸಜ್ಜಾಗಿದೆ. “ಬಿಲ್ ಗೇಟ್ಸ್’ ಎಂಬ ಇನ್ನೊಂದು ಚಿತ್ರದಲ್ಲೂ ಶಿಶಿರ್ ಸದ್ದಿಲ್ಲದೆ ನಟಿಸಿದ್ದಾರೆ. ಅದಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದೆ.
ಒಂದು ಹಾಡು ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ಈ ಎರಡು ಚಿತ್ರಗಳು ಬಿಡುಗಡೆ ಹಂತಕ್ಕೆ ಬಂದಿರುವಾಗಲೇ ಶಿಶಿರ್, “ಭೂತಕಾಲದ ದರ್ಬಾರ್’ ಎಂಬ ಚಿತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಮಂಜು ನಿರ್ದೇಶಕರು. ಇದು ಇವರ ಮೊದಲ ಚಿತ್ರ. ಶೇ.40 ರಷ್ಟು ಚಿತ್ರೀಕರಣ ಮಾಡಿರುವ ನಿರ್ದೇಶಕರು, ಈ ಚಿತ್ರದ ಮೂಲಕ ಥ್ರಿಲ್ಲರ್ ಮತ್ತು ಸೈಕಲಾಜಿಕಲ್ ಅಂಶಗಳನ್ನಿಟ್ಟುಕೊಂಡು ಕಥೆ ಹೇಳಹೊರಟಿದ್ದಾರಂತೆ.
ನಾಯಕನ ಸುತ್ತ ನಡೆಯುವ ಕಥೆಯನ್ನು ಹೊಸ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿರುವ ನಿರ್ದೇಶಕರು, ನಾಯಕ ತನ್ನ ಜೀವನದಲ್ಲಿ ಮರೆತಿರುವ ಘಟನೆಗಳು ಪುನರಾವರ್ತನೆಗೊಂಡಾಗ, ಏನೆಲ್ಲಾ ಆಗುತ್ತೆ ಎಂಬುದು ಚಿತ್ರದ ಸಾರಾಂಶ. ಐಶ್ವರ್ಯ ಸಿಂಧೋಗಿ ಈ ಚಿತ್ರಕ್ಕೆ ನಾಯಕಿಯಾಗಿ ನಟಿಸಿದ್ದಾರೆ.
ಶಂಕರ್ ಕ್ಯಾಮೆರಾ ಹಿಡಿದರೆ, ನೊಬಿನ್‌ಪಾಲ್ ಅವರು ಸಂಗೀತ ನೀಡುತ್ತಿದ್ದಾರೆ. ಶಿಶಿರ್ ಸದ್ಯಕ್ಕೆ “ಮಿ.ಎಲ್‌ಎಲ್‌ಬಿ’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟಿರುವ ಶಿಶಿರ್‌ಗೆ, ಒಳ್ಳೆಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಖುಷಿ ಇದೆ. ಸಿನಿಮಾ ಮಾಡಿದರೂ ಕಿರುತೆರೆ ನಂಟು ಬಿಡುವುದಿಲ್ಲ ಎನ್ನುವ ಶಿಶಿರ್, ಈಗಲೂ “ಕುಲವಧು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. “ಕಿರುತೆರೆ ನನಗೆ ಅತ್ಯಂತ ತೃಪ್ತಿ ಕೊಟ್ಟ ಕ್ಷೇತ್ರ. ಸಿನಿಮಾ ಅವಕಾಶ ಬಂದಾಗ, ನಿರ್ದೇಶಕ “ಮಿಲನ’ ಪ್ರಕಾಶ್ ಅವರು ಡೇಟ್ ಹೊಂದಾಣಿಕೆ ಮಾಡಿಕೊಂಡು ಸಿನಿಮಾ ಮಾಡಲು ಸಹಾಯ ಮಾಡಿದ್ದಾರೆ ‘ ಎನ್ನುವುದನ್ನು ಮರೆಯುವುದಿಲ್ಲ ಶಿಶಿರ್.