Advertisement

Gangolli: ಗಂಗೊಳ್ಳಿ ಅಗ್ನಿ ದುರಂತ ಸ್ಥಳಕ್ಕೆ ಸಂಸದರ ಭೇಟಿ

01:27 AM Nov 17, 2023 | Team Udayavani |

ಗಂಗೊಳ್ಳಿ: ಮೀನುಗಾರಿಕೆ ಸಚಿವರು ಗಂಗೊಳ್ಳಿಗೆ ಬಂದು ವಸ್ತುಸ್ಥಿತಿ ನೋಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿ ಸರಕಾರ, ಮುಖ್ಯಮಂತ್ರಿಗಳು ಮೀನು ಗಾರರ ಸಹಾಯಕ್ಕೆ ನಿಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ವಿಶೇಷ ಪರಿಹಾರ ರೂಪದಲ್ಲಿ 10 ಕೋ.ರೂ. ನೀಡಬೇಕು ಎಂದು ಮನವಿ ಸಲ್ಲಿಸಿದ್ದು, ಇನ್ನೊಂದು ವಾರದೊಳಗೆ ಸರಕಾರ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಅವರು ಗುರುವಾರ ಗಂಗೊಳ್ಳಿಯ ಮ್ಯಾಂಗನೀಸ್‌ ವಾರ್ಫ್‌ನಲ್ಲಿ ಸೋಮವಾರ ಅಗ್ನಿ ಅವಘಡದಿಂದ 9 ಬೋಟುಗಳು ಸುಟ್ಟು ಕರಲಾಗಿ, ಕೋಟ್ಯಂತರ ರೂ. ನಷ್ಟ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

ಶಾಸಕ ಗುರುರಾಜ್‌ ಗಂಟಿಹೊಳೆ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರಕರಣದ ಗಂಭೀರತೆ ಬಗ್ಗೆ ಮನವರಿಕೆ ಮಾಡಲಾಗಿದೆ. ಮೀನುಗಾರರು ಮತ್ತೆ ಬದುಕನ್ನು ಕಟ್ಟಿಕೊಳ್ಳಲು ಸರಕಾರ ನೆರವಾಗಬೇಕು ಎಂದರು.

ವರದಿ: ಡಿಸಿಗೆ ಸೂಚನೆ
ಘಟನೆ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಸಂಸದರು ಚರ್ಚೆ ನಡೆಸಿದರು. ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತ್ವರಿತವಾಗಿ ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಬಿಡುಗಡೆಗೆ ಪ್ರಯತ್ನಿಸುವಂತೆ ಸೂಚಿಸಿದರು.

ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್‌, ಪ್ರ.ಕಾರ್ಯದರ್ಶಿ ಸದಾನಂದ ಉಪ್ಪಿನ ಕುದ್ರು, ಉಪಾಧ್ಯಕ್ಷ ಆನಂದ ಖಾರ್ವಿ, ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಪ್ರಮುಖರಾದ ವಿನೋದ ಭಂಡಾರಿ, ಪ್ರಿಯದರ್ಶಿನಿ ದೇವಾಡಿಗ, ಬಿ.ಎಸ್‌.ಸುರೇಶ ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ, ಶರತ್‌ ಕುಮಾರ್‌ ಶೆಟ್ಟಿ, ಸುರೇಂದ್ರ
ಖಾರ್ವಿ, ನಾಗರಾಜ ಶೆಟ್ಟಿ ನಾರ್ಕಳಿ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಹರೀಶ ಮೇಸ್ತ ಜತೆಗಿದ್ದರು.

Advertisement

ಕರಾವಳಿ ತೀರದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಪಂಪ್‌ ಹೌಸ್‌ ನಿರ್ಮಾಣದ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಕೇಂದ್ರ ಸರಕಾರ ದಿಂದ ವಿಶೇಷ ಯೋಜನೆ ತಯಾರಿಸಿ ಜಾರಿಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ರಾಜ್ಯ ಸರಕಾರ ಕೂಡ ಈ ಬಗ್ಗೆ ಗಮನಹರಿಸಬೇಕು.
– ಬಿ.ವೈ. ರಾಘವೇಂದ್ರ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next