ಹಾನಗಲ್ಲ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಾನಗಲ್ಲ ತಾಲೂಕು ಸೇರ್ಪಡೆಗೊಂಡಿದ್ದು, ತಾಲೂಕಿನ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ರವಿವಾರ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಟಿಎಸ್‌ಪಿ ಯೋಜನೆಯಡಿ 13.50 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಕಾಮಗಾರಿ, ಬೆಳಗಾಲಪೇಟ ಗ್ರಾಮದಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಕಾಡೇಟ್ಟಿಹಳ್ಳಿ ಗ್ರಾಮದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಸಾಂವಸಗಿ ಗ್ರಾಮದಲ್ಲಿ 14.04 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಸಿಂಚಾಯಿನಿ ಯೋಜನೆಯಡಿ ಸಣ್ಣ ಹಿಡುವಳಿದಾರರಿಗೆ ಬೋರವೆಲ್ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಈ ಯೋಜನೆಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಮಹಿಳಾ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ತಾಲೂಕಿನಲ್ಲಿರುವ 525 ಕೆರೆಗಳಲ್ಲಿ ಈಗಾಗಲೇ ಎರಡು ಏತ ನೀರಾವರಿ ಮೂಲಕ 389 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯಲಿದೆ. ಈ ಯೋಜನೆಯಿಂದ ಬಿಟ್ಟು ಹೋಗಿರುವ ಎಲ್ಲ ಕೆರೆಗಳನ್ನು ನೀರಾವರಿಗೊಳಪಡಿಸುವ ಉದ್ದೇಶ ವಿದೆ. ಮುಂದಿನ ದಿನಗಳಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಕಾಡೆಶೆಟ್ಟಿಹಳ್ಳಿ ಗ್ರಾಮದಲ್ಲಿ ಪಂಚಾಕ್ಷರ ಗವಾಯಿಗಳವರ ಹೆಸರಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 10 ಕೋಟಿ ರೂಪಾಯಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು. ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವುದಾಗಿ ಸಂಸದ ಶಿವಕುಮಾರ ಉದಾಸಿ ಭರವಸೆ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಅಕ್ಕಮ್ಮ ಅರಳೇಶ್ವರ, ಸಾಲೇಹಾಬಾನು ಮುಲ್ಲಾ, ಮಹೇಶಕುಮಾರ ಕಮಡೊಳ್ಳಿ, ಜಿಲ್ಲಾ ಪಂಚಾಯತ ಸದಸ್ಯ ಮಾಲತೇಶ ಸೊಪ್ಪಿನ, ತಾಲೂಕಾ ಪಂಚಾಯತ ಸದಸ್ಯರಾದ ಬಸವರಾಜ ಬೂದಿಹಾಳ, ಶೀಲಾ ಗಡಿಯಪ್ಪನವರ, ಬಿಜೆಪಿ ತಾಲೂಕಾಧ್ಯಕ್ಷ ರಾಜೂ ಗೌಳಿ, ಚಂದ್ರಣ್ಣ ಹರಿಜನ, ಗಂಗಾಧರ ಬಿದರಣ್ಣನವರ, ಚನ್ನಪ್ಪ ಕೋರಿಶೆಟ್ಟರ, ಜಗದೀಶ ಬೆಣ್ಣಿ ಮೊದಲಾದವರು ಈ ಸಂದರ್ಭದಲ್ಲಿದ್ದರು.