ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಶನಿವಾರ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದ ಸಂಸದ ತೇಜಸ್ವಿ ಸೂರ್ಯ ಅವರನ್ನು ಸನ್ಮಾನಿಸಲಾಯಿತು.
ಆಚಾರ್ಯತ್ರಯರ ಜಯಂತಿ ಅಂಗವಾಗಿ ಬನಶಂಕರಿ 2ನೇ ಹಂತದ ಗಾಯತ್ರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ತೇಜಸ್ವಿ ಸೂರ್ಯ ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ನನಗೆ ಆಶೀರ್ವಾದ ಮಾಡಿದ್ದೀರಿ. ಹೀಗಾಗಿ ನಿಮಗೆಲ್ಲರಿಗೂ ಧನ್ಯವಾದಗಳು. ಮುಂದಿನ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತಷ್ಟು ಪ್ರಗತಿ ಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದು, ಜನ ಮೆಚ್ಚುವಂತ ಯೋಜನೆಗಳನ್ನು ನೀಡಲಿದ್ದಾರೆ.
ವಿಶ್ವದಲ್ಲಿ ಭಾರತ ಮತ್ತಷ್ಟು ಬಲಿಷ್ಠ ವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಧಿಕ ಅಂತರದಿಂದ ಮತದಾರರು ಆಶೀರ್ವಾದ ಮಾಡಿದ್ದು ನಾಡು ಮೆಚ್ಚು ಕೆಲಸ ಮಾಡುವುದಾಗಿ ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟ ನಾರಾಯಣ, ಚಿಕ್ಕವಯಸ್ಸಿನಲ್ಲೇ ದೊಡ್ಡ ಸ್ಥಾನವನ್ನು ತೇಜಸ್ವಿ ಸೂರ್ಯ ಏರಿದ್ದಾರೆ.
ಎಳೆಯ ವಯಸ್ಸಿನಲ್ಲಿಯೇ ಸಂಸದರಾಗುವುದು ಹುಡುಗಾಟಿಕೆಯ ಮಾತಲ್ಲ.ಅಂತಹ ಸಾಧನೆಯನ್ನು ತೇಜಸ್ವಿ ಸೂರ್ಯ ಮಾಡಿರುವುದಕ್ಕೆ ಇಡೀ ಬ್ರಾಹ್ಮಣ ಮಹಾಸಭಾ ಹೆಮ್ಮೆ ಪಡುತ್ತದೆ. ಮುಂದಿನ ದಿನಗಳಲ್ಲಿ ಈ ದೇಶ ಮತ್ತು ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಲಿ. ಜನ ಮೆಚ್ಚುವ ಆದರ್ಶ ಸಂಸದರಾಗಿ ಬೆಳೆಯಲಿ ಎಂದು ಆಶಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಲಕ್ಷ್ಮೀಕಾಂತ, ರಾಮಮೂರ್ತಿ, ಕೋಶಾಧ್ಯಕ್ಷ ಕೆ.ರಾಮಕೃಷ್ಣ, ಪೊ›.ಕೆ.ಇ.ರಾಧಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ವಿನೂತಾ ಎನ್. ಸ್ವಾಮಿ ತಂಡದವರು ಶಂಕರಾಚಾರ್ಯರ ಸ್ತೋತ್ರ, ಯಮುನಾ ರಾಮಪ್ರಿಯ ತಂಡದವರು ರಾಮಾನುಜಾಚಾರ್ಯರ ಸ್ತುತಿ ಹಾಗೂ ಭೀಮೇಶ ಕೃಷ್ಣ ಭಜನಾ ಮಂಡಳಿ ಮಧ್ವಜಯಗೀತೆ ಪ್ರಸ್ತುತ ಪಡಿಸಿದರು.