Advertisement

ಡ್ಯಾಂ ಸಮಸ್ಯೆ ಬಗೆಹರಿಸುವರೇ ಸಂಸದ ಸಂಗಣ್ಣ?

09:14 AM May 27, 2019 | Team Udayavani |

ಗಂಗಾವತಿ: ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು ಅರ್ಧ ಶತಮಾನ ಕಳೆದಿದ್ದು, ಅವೈಜ್ಞಾನಿಕ ನೀರು ನಿರ್ವಹಣೆಯಿಂದ ಜಲಾಶಯದ ಹತ್ತು ಹಲವು ಸಮಸ್ಯೆಗಳಿಂದಾಗಿ ರೈತರು ಕಂಗಾಲಾಗಿದ್ದಾರೆ. ನಾಲ್ಕೈದು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರು ಒಂದೇ ಬೆಳೆ ಬೆಳೆಯುವ ಎದುರಾದ್ದು, ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಪ್ರಚಾರ ಸಭೆಯಲ್ಲಿ ತಾವು ಗೆದ್ದು ಬಂದರೆ ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಮತ್ತು ಸಮನಾಂತರ ಜಲಾಶಯ ನಿರ್ಮಾಣದ ಭರವಸೆ ನೀಡುತ್ತಾರೆ. ಈ ಭಾರಿಯೂ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪ್ರಚಾರ ಭಾಷಣದಲ್ಲಿ ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನೂತನ ಸಂಸದ ಕರಡಿ ಸಂಗಣ್ಣ ನಿರಂತರ ಯತ್ನದ ಮೂಲಕ ತುಂಗಭದ್ರಾ ಜಲಾಶಯ ಹೂಳಿನ ಸಮಸ್ಯೆ ಮಳೆಗಾಲದಲ್ಲಿ ನದಿಯ ಮೂಲಕ ನೀರು ಸಮುದ್ರಕ್ಕೆ ಸೇರುವುದನ್ನು ತಡೆಯಲು ನವಲಿ ಹತ್ತಿರ 33 ಟಿಎಂಸಿ ಅಡಿ ನೀರು ಸಂಗ್ರಹ ಮಾಡುವ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರದಿಂದ ಹಣಕಾಸು ನೆರವು ಪಡೆಯಬೇಕಿದೆ.

Advertisement

ಜಲಸಂಪನ್ಮೂಲ ಹೆಚ್ಚಳಕ್ಕೆ ಕ್ರಮ: ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶ ಕಡಿಮೆ ಇತ್ತು. 50 ವರ್ಷಗಳಲ್ಲಿ ಅಚ್ಚುಕಟ್ಟು ಪ್ರದೇಶ ಹೆಚ್ಚಳವಾಗಿದೆ. ನಿರ್ಮಾಣದ ಸಂದರ್ಭದಲ್ಲಿ ಕೃಷಿ ಮತ್ತು ಕುಡಿಯುವ ನೀರಿಗಾಗಿ ಡ್ಯಾಂ ನೀರು ಬಳಸಲಾಗುತ್ತಿತ್ತು. 30 ವರ್ಷಗಳಿಂದ ಹೊಸಪೇಟೆ, ಕೊಪ್ಪಳ, ಹಗರಿಬೊಮ್ಮನಹಳ್ಳಿ, ಮುಂಡರಗಿ ಭಾಗದಲ್ಲಿ ಕೈಗಾರಿಕೆಗಳು ಆರಂಭವಾಗಿವೆ. ಪ್ರತಿ ವರ್ಷ ಕನಿಷ್ಟ 10 ಟಿಎಂಸಿ ಅಡಿಯಷ್ಟು ನೀರನ್ನು ಕೈಗಾರಿಕೆಗಳು ಬಳಕೆ ಮಾಡಿಕೊಳ್ಳುತ್ತಿವೆ. ಹರಿಹರ, ಹಗರಿಬೊಮ್ಮನಹಳ್ಳಿ, ಕೊಪ್ಪಳ, ಮುಂಡರಗಿ, ಗದಗ, ಕನಕಗಿರಿ ಸೇರಿ ಇನ್ನೂ ಕೆಲ ತಾಲೂಕಿನ ಕೆರೆಗಳನ್ನು ಭರ್ತಿ ಮಾಡಲು ಈ ಡ್ಯಾಂ ನೆರವಾಗಿದೆ. ಕೃಷಿ ಅಲ್ಲದೇ ಇನ್ನಿತರೆ ಕಾರ್ಯಕ್ಕೂ ಡ್ಯಾಂ ನೀರನ್ನು ಬಳಕೆ ಮಾಡುವುದರಿಂದ ಡ್ಯಾಂ ನೀರು ಎರಡು ಬೆಳೆಗೆ ಸಾಲುತ್ತಿಲ್ಲ. ಈ ಸಮಸ್ಯೆಯನ್ನು ದೂರ ಮಾಡಲು ತುಂಗಭದ್ರಾ ಡ್ಯಾಂಗೆ ಕಾಳಿ, ಕೃಷ್ಣ ನದಿಯನ್ನು ಜೋಡಿಸುವ ಯೋಜನೆ ಡಿಪಿಆರ್‌ ಮಾಡಿಸಲಾಗಿದ್ದು ಅನುಷ್ಠಾನವಾಗಿಲ್ಲ. ಕೇಂದ್ರದ ನೂತನ ಸರಕಾರಕ್ಕೆ ಇದನ್ನು ಮನವರಿಕೆ ಮಾಡಿ ಆಂಧ್ರಪ್ರದೇಶದಲ್ಲಿ ಪೂಲವರಂ ಪ್ರಾಜೆಕ್ಟರ್‌ ಮಾದರಿಯಲ್ಲಿ ತುಂಗಭದ್ರಾ ಡ್ಯಾಂನ ಜಲಸಂಪನ್ಮೂಲ ಹೆಚ್ಚಳ ಮಾಡುವ ಮೂಲಕ ಸಮಸ್ಯೆಯನ್ನು ಶಾಶ್ವತ ಇತ್ಯರ್ಥ ಮಾಡಬೇಕಿದೆ.

ತುಂಗಭದ್ರಾ ಡ್ಯಾಂ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿಯಾಗಿದ್ದು, ಡ್ಯಾಂ ಬಗ್ಗೆ ಯಾವುದೇ ಯೋಜನೆ ಅನುಷ್ಠಾನ ಮಾಡಲು ಎಲ್ಲಾ ರೈತರ ಸಹಕಾರ ಮುಖ್ಯವಾಗುತ್ತದೆ. ಎಲ್ಲಾ ಜನಪ್ರತಿನಿಧಿಗಳ ಸಹಕಾರ ಪಡೆಯುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

•ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next