Advertisement

ಕ್ಲಾಕ್‌ ಟವರ್‌ ಮೇಲೆ ರಾಷ್ಟ್ರ ಧ್ವಜ ಹಾರಿಸುವೆ

01:50 PM Mar 15, 2022 | Team Udayavani |

ಮುಳಬಾಗಿಲು : ಶೀಘ್ರದಲ್ಲಿಯೇ ಕೋಲಾರದ ಕ್ಲಾಕ್‌ ಟವರ್‌ಗೆ ತ್ರಿವರ್ಣ ಧ್ವಜದ ಬಣ್ಣ ಹಚ್ಚಿ ರಾಷ್ಟ್ರಧ್ವಜವನ್ನು ಹಾರಿಸುವುದಾಗಿ ಸಂಸದ ಎಸ್‌.ಮುನಿಸ್ವಾಮಿ ಸವಾಲು ಹಾಕಿದರು.

Advertisement

ನಗರದ ಹಳೆಯ ನ್ಯಾಯಾಲಯದ ಮುಂಭಾಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್‌, ಭಜರಂಗದಳ, ಶ್ರೀರಾಮಸೇನೆ, ಹಿಂದೂ ಜಾಗರಣೆ ವೇದಿಕೆಯಿಂದ ಏರ್ಪಡಿಸಿದ್ದ 392ನೇ ಚತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶ, ಧರ್ಮದ ಬಗ್ಗೆ ಯಾರು ಗೌರವ ಕೊಡುತ್ತಾರೊ ಅವರಿಗೆ ನಾವು ಗೌರವ ನೀಡುತ್ತೇವೆ. ಗೌರವ ಕೊಡದವರಿಗೆ ನಾವೂ ಗೌರವ ನೀಡಲ್ಲ ಎಂದರು.

ವರ್ಕ್‌ ಷಾಪ್‌, ಚಿಕನ್‌ ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ಹಿಂದೂಗಳು ಗುಲಾಮರಾಗಿದ್ದಾರೆ, ಅವರಿಗೆ ಆತ್ಮಸಾಕ್ಷಿಯ ಅಗತ್ಯವಿದೆ ಎಂದು ಟೀಕಿಸಿದರಲ್ಲದೆ ತೆಲುಗು ಚಲನಚಿತ್ರದ ಡೈಲಾಗ್‌ ಅನ್ನು ವೇದಿಕೆಯಲ್ಲಿ ಹೇಳಿದಾಗ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು. ಭಾರತ ದೇಶವನ್ನು ಅನ್ಯ ಧರ್ಮಿಯರು 800 ವರ್ಷ ಆಳಿದ್ದಾರೆ. ಈ ದೇಶದಲ್ಲಿ 100 ಕೋಟಿ ಹಿಂದುಗಳು ಇದ್ದೀವಿ, ನಾವುಗಳು ಮನಸ್ಸು ಮಾಡಿದರೆ ನಿಮ್ಮ ಅಂಗಡಿಗಳಲ್ಲಿ ವ್ಯಾಪಾರ ಆಗಲ್ಲ ಎಂದು ವ್ಯಂಗವಾಡಿದರು.

ನಿಮ್ಮ ಕೈಯಲ್ಲಿ ಏನೂ ಆಗಲ್ಲ, ಕೋಲಾರ ಕ್ಲಾಕ್‌ ಟವರ್‌ ನಮ್ಮದು ಎಂದರಲ್ಲದೆ ನಾನು ಎಂ.ಪಿ ಆಗುವುದಕ್ಕೆ ಮುಂಚೆಯೇ ಇದರ ಮೇಲೆ ಕಣ್ಣು ಇಟ್ಟಿದ್ದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಮ್ಮದೇ ಪಕ್ಷ ಅಧಿಕಾರದಲ್ಲಿ ಇರುವುದರಿಂದ ನಮ್ಮ ವಶಕ್ಕೆ ಪಡೆದುಕೊಂಡು ತೀರುತ್ತೇವೆಂದು ಸವಾಲು ಹಾಕಿದರು.

ಪ್ರಕರ ಬಾಲವಾಗ್ಮಿ, ಹಿಂದೂಪರ ಹೋರಾಟಗಾರ್ತಿ ಹಾರಿಕಾ ಮಂಜುನಾಥ್‌, ವಿಶ್ವ ಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್‌ ಪಂಪುವೆಲ್‌, ಕೊರ‌್ಲಹಳ್ಳಿ ವೆಂಕಟೇಶ ಆಚಾರ್ಯ ಸ್ವಾಮೀಜಿ ಹಿಂದೂ ಧರ್ಮ, ಮತ್ತು ಶಿವಾಜಿ ಅವರ ಬಗ್ಗೆ ಭಾಷಣ ಮಾಡಿದರು.

Advertisement

ಮಧ್ಯಾಹ್ನ 2 ಗಂಟೆಗೆ ಮುತ್ಯಾಲಪೇಟೆಯ ಗಂಗಮ್ಮ ಗುಡಿಯ ಮುಂಭಾಗದಿಂದ ಪ್ರಾರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾತ್ರಿ 7 ಗಂಟೆಗೆ ಹಳೆ ಕೋರ್ಟ್‌ ಮುಂಭಾಗದಲ್ಲಿ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿದರು, ರಾತ್ರಿ 9.30 ಗಂಟೆಯ ವರೆಗೂ ಕಾರ್ಯಕ್ರಮ ನಡೆಯಿತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next