ಬಂಗಾರಪೇಟೆ: 9 ವರ್ಷಗಳಿಂದ ಶಾಸಕನಾಗಿರುವ ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ ಯಾರಿಂದಲೂ ಹಣವೇ ಪಡೆದಿಲ್ಲವೇ, ಅವರು ಅಷ್ಟೊಂದು ಪ್ರಾಮಾಣಿಕರೇ? ಕ್ಷೇತ್ರದಲ್ಲಿ ಸರ್ಕಾರಿ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರರೇ ಕಾಂಗ್ರೆಸ್ ಶಾಸಕರ ಬಗ್ಗೆ ನಿಜಾಂಶ ಸಾಬೀತು ಮಾಡಲಿ ಎಂದು ಸಂಸದ ಎಸ್.ಮುನಿಸ್ವಾಮಿ ಶಾಸಕರಿಗೆ ತಿರುಗೇಟು ನೀಡಿದರು.
ತಾಲೂಕಿನ ಕೆಸರನಹಳ್ಳಿ ಹಾಗೂ ಚಿಕ್ಕವಲಗಮಾದಿ ಗ್ರಾಮಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಪರ್ಶೇಂಟೇಜ್ ಸರ್ಕಾರ ಎಂದು ಸುಳ್ಳು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಶಾಸಕ ಎಸ್.ಎನ್ .ನಾರಾಯಣಸ್ವಾಮಿ 9 ವರ್ಷಗಳಿಂದಲೂ ಸರ್ಕಾರಗಳಿಗೆ ಪಸೇಂìಟೇಜ್ ನೀಡಿಯೇ ಕಾಮಗಾರಿಗಳನ್ನು ಮಾಡುತ್ತಿದ್ದಾರೆಯೇ, ಹಾಗಿದ್ದರೇ ಸರ್ಕಾರಕ್ಕೆ ಶೇ. 40 ಪರ್ಸೆಂಟೇಜ್ ನೀಡಲು ಹಣ ಎಲ್ಲಿಂದ ಬರುತ್ತಿದೆ ಎಂದು ಮೊದಲು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಧಿಕಾರಾವಧಿಯಲ್ಲಿ ಇದುವರೆಗೂ 2 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಹೇಳಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ 400 ಗ್ರಾಮಗಳಿವೆ. 2 ಸಾವಿರ ಕೋಟಿ ಅನುದಾನ ತಂದಿದ್ದರೇ ಪ್ರತಿಯೊಂದು ಗ್ರಾಮಕ್ಕೂ ಕನಿಷ್ಠ 5 ಕೋಟಿ ಖರ್ಚು ಮಾಡಬಹುದಾಗಿತ್ತು. 2 ಸಾವಿರ ಕೋಟಿ ಎಲ್ಲಿ ಖರ್ಚು ಮಾಡಿದ್ದಾರೆ. ಕೆರೆ-ಕುಂಟೆಗಳಲ್ಲಿ ಚೆಲ್ಲಿದ್ದಾರಾ, 2 ಸಾವಿರ ಕೋಟಿ ಅನುದಾನವನ್ನು ತರಲು ಶೇ. 40 ಪರ್ಶೇಂಟ್ ನೀಡಿದ್ದರೆ ಲಂಚ ಎಷ್ಟು ಕೋಟಿ ಕೊಟ್ಟಿರಬಹುದು. ಇದಕ್ಕೆಲ್ಲಾ ಹಣ ಎಲ್ಲಿಂದ ಬಂದಿದೆ ಎನ್ನುವುದನ್ನು ಸಾಬೀತು ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಕಾಮಗಾರಿಗಳನ್ನು ನಿರ್ವಹಣೆ ಮಾಡುವ ಗುತ್ತಿಗೆದಾರರು ಜನಪ್ರತಿನಿಧಿ ಗಳಿಗೇನಾದರೂ ಹಣ ನೀಡದೆ ಇದ್ದಲ್ಲಿ ದೊಡ್ಡ ಸಾಹುಕಾರರಾಗುತ್ತಿದ್ದರು. ಎಲ್ಲಾ ಗುತ್ತಿಗೆದಾರರು ಹಾಗೂ ಗುತ್ತಿಗೆದಾರರಿಂದ ಹಣ ಪಡೆದಿರುವವರು ಆತ್ಮಾವಲೋಕನ ಮಾಡಿಕೊಳ್ಳಲಿ, ಟೆಂಡರ್ ಹಾಕಿ ಹಣ ಮುಂಗಡವಾಗಿ ಸರ್ಕಾರಕ್ಕೆ ಕಟ್ಟಿ ಕಾಮಗಾರಿ ಕಾರ್ಯಾದೇಶ ಪಡೆದರೂ ಸಹ ಅಂತಿಮವಾಗಿ ಕೆಲಸ ಶುರು ಮಾಡಬೇಕಾದರೆ ಪರ್ಸೆಂಟೇಜ್ ನೀಡದೇ ಇದ್ದಲ್ಲಿ ಕಾಮಗಾರಿ ಪ್ರಾರಂಭ ಮಾಡುವಂತಿಲ್ಲ ಎನ್ನುವ ಸತ್ಯಾಂಶ ಎಲ್ಲರಿಗೂ ಗೊತ್ತಿದೆ ಎಂದರು.
ಶಾಸಕರ ವಿರುದ್ಧ ವಾಗ್ಧಾಳಿ: ದೇಶಿಹಳ್ಳಿಯಲ್ಲಿ ಕೆಜಿಎಫ್ ರಸ್ತೆಗೆ ಎಷ್ಟು ಹಣ ಬಿಡುಗಡೆಯಾಗಿದೆ. ಟೆಂಡರ್‌ಗೆ ಹೋಗಿದೆಯೇ, ಇಲ್ಲವೇ, ಈ ಕಾಮಗಾರಿ ಪೈಲ್ ಯಾವ ಹಂತದಲ್ಲಿದೆ. ಈ ರಸ್ತೆಯಲ್ಲಿರುವ ಮರಗಳು ಕಟಾವು ಆಗಬೇಕು, ವಿದ್ಯುತ್ ಕಂಬಗಳನ್ನು ಬೇರ್ಪಡಿಸಬೇಕು, ಟೆಂಡರ್ ಗೆ ಕರೆಯಬೇಕು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಉದ್ಘಾಟನೆ ಮಾಡದೇ ತಮ್ಮ ಇಚ್ಛಾನುಸಾರ ಮುಂದಿನ ಚುನಾವಣೆ ದೃಷ್ಟಿಕೋನ ಇಟ್ಟುಕೊಂಡು ಕೇವಲ ಭೂಮಿ ಪೂಜೆ ನಡೆಸಿದರೆ ಸಾಕೇ ಎಂದು ಶಾಸಕ ಎಸ್.ಎನ್ .ನಾರಾಯಣಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್, ಪುರಸಭೆ ಸದಸ್ಯ ಕಪಾಲಿ ಶಂಕರ್, ತಾಪಂ ಮಾಜಿ ಸದಸ್ಯ ಶಿವಣ್ಣ, ಚಿಕ್ಕವಲಗಮಾದಿ ಚೌಡಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕೆಸರನಹಳ್ಳಿ ಮಂಜುನಾಥ್, ಗ್ರಾಪಂ ಸದಸ್ಯ ಗೋವಿಂದಪ್ಪ, ಅಮರೇಶ್, ರೆಡ್ಡಿಹಳ್ಳಿ ಗಂಗಾಧರ್, ತಟ್ನಹಳ್ಳಿ ಕಿರಣ್‌ಸಿಂಗ್, ಕೆಸರನಹಳ್ಳಿ ಶ್ರೀನಿವಾಸ್, ಕೃಷ್ಣಮೂರ್ತಿ, ಕೀಲುಕೊಪ್ಪ ಸುರೇಂದ್ರ, ಚಂದ್ರಪ್ಪ, ಐನೋರಹೊಸಹಳ್ಳಿ ಮನೋಜ್, ಹಿರೇಕರಪನಹಳ್ಳಿ ಅಮರೇಶ್, ಡಿ.ಕೆ.ಹಳ್ಳಿ ಕುಮಾರ್, ಬಾಬು ಇತರರಿದ್ದರು.