ಭೋಪಾಲ್: ಮಧ್ಯಪ್ರದೇಶದ ಖಾರ್ಗಾಂವ್ ನಲ್ಲಿ ಭಾನುವಾರ (ಏ.10) ಸಂಭವಿಸಿದ ಕೋಮುಗಲಭೆಯ ದುಷ್ಕರ್ಮಿಗಳನ್ನು ಗುರುತಿಸಲಾಗಿದೆ. ಅವರನ್ನು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ (ಏ.11) ತಿಳಿಸಿದ್ದಾರೆ.
ಇದನ್ನೂ ಓದಿ:ಕೊಪ್ಪಳ: ಕಾರು-ಸ್ಕೂಟಿ ಮುಖಾಮುಖಿ ಢಿಕ್ಕಿ: ಸಂಸದ ಸಂಗಣ್ಣ ಕರಡಿ ಸಹೋದರ ಸ್ಥಳದಲ್ಲೇ ಸಾವು
ಭಾನುವಾರ ರಾಮ ನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.
ರಾಮನವಮಿ ವೇಳೆ ಗಲಭೆ ನಡೆಸಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ, ಪಾಸ್ತಿಗೆ ನಷ್ಟವುಂಟು ಮಾಡಿದ್ದು, ಗಲಭೆಕೋರರಿಂದ ನಷ್ಟವನ್ನು ವಸೂಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಚೌಹಾಣ್ ಹೇಳಿದ್ದಾರೆ.
ಕಲ್ಲು ತೂರಾಟ ನಡೆಸಿದ್ದ ಸಂದರ್ಭದಲ್ಲಿ ಘರ್ಷಣೆ ನಡೆದು ಬೆಂಕಿ ಹಚ್ಚಿದ ಪರಿಣಾಮ ಹಲವಾರು ವಾಹನಗಳು, ಮನೆಗಳು ಸುಟ್ಟು ಹೋಗಿದ್ದವು ಎಂದು ಖಾರ್ಗಾಂವ್ ಹೆಚ್ಚುವರಿ ಕಲೆಕ್ಟರ್ ಸುಮೇರ್ ಸಿಂಗ್ ಮುಜಾಲ್ಡೆ ತಿಳಿಸಿದ್ದಾರೆ.
ಖಾರ್ಗಾಂವ್ ಘಟನೆ ದುರಾದೃಷ್ಟಕರ. ಗಲಭೆಕೋರರನ್ನು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮಧ್ಯಪ್ರದೇಶದಲ್ಲಿ ಗಲಭೆ ಎಬ್ಬಿಸುವವರಿಗೆ ಜಾಗವಿಲ್ಲ. ದುಷ್ಕರ್ಮಿಗಳನ್ನು ಗುರುತಿಸಲಾಗಿದ್ದು, ನಮ್ಮ ಕ್ರಮ ಜೈಲುಶಿಕ್ಷೆಗಷ್ಟೇ ಸೀಮಿತವಾಗುವುದಿಲ್ಲ ಎಂದು ಮುಜಾಲ್ಡೆ ಖಡಕ್ ಸಂದೇಶ ರವಾನಿಸಿದ್ದಾರೆ.