Advertisement

ನಗರದ ವರ್ತುಲ ರಸ್ತೆಗೆ ಸಿಸಿ ಕ್ಯಾಮೆರಾ ಕಣ್ಗಾವಲು

02:32 PM Feb 17, 2021 | Team Udayavani |

ಮೈಸೂರು: ನಗರದ ಸುತ್ತಲಿನ ರಿಂಗ್‌ ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯ (ಡೆಬ್ರಿಸ್‌), ತ್ಯಾಜ್ಯ ಸುರಿಯುವುದನ್ನು ನಿಯಂತ್ರಿಸಲು, ಪೊಲೀಸರ ಗಸ್ತು, ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ದಂಡದಜೊತೆಗೆ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

Advertisement

ಮೈಸೂರು ಜಿಪಂ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸುತ್ತಲಿನ 43.5 ಕಿ.ಮೀ. ವ್ಯಾಪ್ತಿಯ ರಿಂಗ್‌ ರಸ್ತೆಯಲ್ಲಿ ಸುರಿಯಲಾಗಿದ್ದ ಡೆಬ್ರಿಸ್‌ ಅನ್ನು ಸತತ ಒಂದು ವಾರಗಳ ಕಾಲ ಕಾರ್ಯಾಚರಣೆ ಮಾಡಿ ವಿಲೇವಾರಿ ಮಾಡಲಾಗಿದೆ. ಈಗ ರಿಂಗ್‌ ರಸ್ತೆ ಡೆಬ್ರಿಸ್‌ನಿಂದ ಮುಕ್ತಗಗೊಂಡಿದ್ದು, ಮತ್ತೆ ಡೆಬ್ರಿಸ್‌ ತಂದು ಸುರಿಯುವ ಸಾಧ್ಯತೆ ಇರುವುದರಿಂದ ಅದನ್ನು ತಪ್ಪಿಸಲು ಪೊಲೀಸರ ಗಸ್ತಿನೊಂದಿಗೆ 75 ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇಡೀ ರಿಂಗ್‌ ರಸ್ತೆಗಳನ್ನು ಮೂರು ವಲಯಗಳನ್ನಾಗಿ ಗುರುತಿಸಿಕೊಂಡು, ಮೈಸೂರು ನಗರ ಪಾಲಿಕೆ, ತಾಪಂ ಮತ್ತು ಮುಡಾದಿಂದ ತಲಾ 25 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

ಸಿಸಿ ಕ್ಯಾಮರಾಗಳು ಹಗಲಿನಂತೆ ರಾತ್ರಿ ವೇಳೆ ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಬೀದಿ ದೀಪಗಳನ್ನು ಸಹ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಡೆಬ್ರಿಸ್‌ ಸುರಿಯುವ ವಾಹನಗಳ ಮಾಲೀಕರು ಮತ್ತು ಚಾಲಕರ ಸಭೆ ನಡೆಸಿ, ಎಲ್ಲೆಂದರಲ್ಲಿ ಡೆಬ್ರಿಸ್‌ ಸುರಿದರೆ ಕಾನೂನಿನಡಿ ದುಬಾರಿ ದಂಡ ವಿಧಿಸುವುದರೊಂದಿಗೆ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿ ಎಂದರು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ಮೈಸೂರು ನಗರ ಸ್ವಚ್ಛ ಸ‌ರ್ವೇಕ್ಷಣೆ ಮುಗಿಯುವವರೆಗೂ ಗ್ರಾಮ ಪಂಚಾಯಿತಿಯವರು, ವಿದ್ಯಾರಣ್ಯಪುರಂ ಸುಯೇಜ್‌ ಫಾರಂ ಆವರಣದಲ್ಲಿ ಕಸ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪರಮೇಶ್‌, ತಾಪಂ ಇಒ ಕೃಷ್ಣ ‌ಕುಮಾರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಪುಟ್ಟರಾಜು, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು, ಗ್ರಾಪಂ ಪಿಡಿಒಗಳು ಮತ್ತು ಅಧಿಕಾರಿಗಳು ಇದ್ದರು.

Advertisement

ಪ್ಲಾಸ್ಟಿಕ್‌ ನಿರ್ಮೂಲನೆಗೆ ವಿಶೇಷ ಕಾರ್ಯಚರಣೆ ನಡೆಸಿ :

ಪ್ಲಾಸ್ಟಿಕ್‌ ಮುಕ್ತ ನಗರ ಮಾಡುವ ಸಂಬಂಧ ಮೈಸೂರು ನಗರ ಪಾಲಿಕೆ ಮತ್ತು ತಾಪಂ ವ್ಯಾಪ್ತಿಯಲ್ಲಿ  ವಿಶೇಷ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್‌ ನಿರ್ಮೂಲನೆಗೆ ಕ್ರಮ ವಹಿಸುವುದರೊಂದಿಗೆ ವರ್ತಕರಿಗೆ ಎಚ್ಚರಿಕೆ ನೀಡಬೇಕು. ಒಂದೆರಡು ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಸಂಸದರು ತಿಳಿಸಿದರು.

ಮೈಸೂರು ನಗರದ ಸೌಂದರ್ಯಕ್ಕೆ ಎಲ್ಲೆಂದರಲ್ಲಿ ಪೋಸ್ಟರ್‌, ಭಿತ್ತಿಪತ್ರಗಳನ್ನು ಅಳವಡಿಸುತ್ತಿರುವುದರಿಂದ ಧಕ್ಕೆ ಆಗುತ್ತಿದ್ದು, ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ನಾಯಕರು ಮತ್ತು ಮುಖಂಡರ ಒತ್ತಡಕ್ಕೆ ಮಣಿಯದೆ ತೆರವುಗೊಳಿಸುವುದರೊಂದಿಗೆ ದಂಡ ವಿಧಿಸಿ ಎಂದು ಪಾಲಿಕೆ ಆಯುಕ್ತರಿಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next