Advertisement

ಪೊಲೀಸರ ನೈತಿಕತೆ ಕುಗ್ಗಿಸುವುದು ಶೋಭೆಯಲ್ಲ: ಸಂಸದ ನಾರಾಯಣಸ್ವಾಮಿ

09:56 AM Jan 24, 2020 | keerthan |

ಚಿತ್ರದುರ್ಗ: ಮಂಗಳೂರು ಬಾಂಬ್ ಪ್ರಕರಣವನ್ನು ಪೊಲೀಸರ ನೈತಿಕತೆ ಕುಸಿಯುವಂತೆ ಮಾತನಾಡುವುದು ಶೋಚನೀಯ ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪೊಲೀಸರು ಕಾನೂನು ಚೌಕಟ್ಟಿನಡಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸ್ವತಂತ್ರವಾಗಿ ಬಿಡಬೇಕು. ಬದಲಾಗಿ ಬಾಂಬ್ ಪ್ರಕರಣ ಇಟ್ಟುಕೊಂಡು ಟೀಕೆ ಮಾಡುವ ಮೂಲಕ ಅವರ ನೈತಿಕತೆ ಕುಗ್ಗಿಸುವ ಕೆಲಸ ಮಾಡುವುದು ಸರಿಯಲ್ಲ. ಇದು ಯಾವುದೇ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಮಂಗಳೂರು ಪೊಲೀಸ್ ಆಯುಕ್ತರು ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಆದರೂ ಎರಡು ಸಲ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಹೀಗೆ ಪೊಲೀಸರ ವಿರುದ್ಧ ಮಾತನಾಡುತ್ತಿರುವುದು ನೋವಿನ ಸಂಗತಿ ಎಂದರು.

ಪ್ರಕರಣ ನಡೆದು ಮೂರ‍್ನಾಲ್ಕು ದಿನದಲ್ಲೇ ಅಪರಾಧಿಯನ್ನು ಪೊಲೀಸರು ಹಿಡಿದಿದ್ದಾರೆ. ಇದು ಕರ್ನಾಟಕ ಪೊಲೀಸರು ಪ್ರಬುದ್ಧರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಬಾಂಬ್ ಪ್ರಕರಣದ ಆರೋಪಿ ಮಾನಸಿಕ ಅಸ್ವಸ್ಥ ಎನ್ನುವುದನ್ನು ಪೊಲೀಸರು ಅಧಿಕೃತವಾಗಿ ಹೇಳಿಲ್ಲ. ವೈದ್ಯಕೀಯ ವರದಿ ಕೂಡಾ ಬಂದಿಲ್ಲ. ಸಂಪೂರ್ಣ ವರದಿ ಬಂದ ನಂತರ ಈ ಬಗ್ಗೆ ಮಾತನಾಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಸರ್ಕಾರವೇ ಬಾಂಬ್ ಪ್ರಕರಣ ಮಾಡಿಸಿರಬಹುದು ಎಂಬ ಟೀಕೆಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದವರೇ ಯಾಕೆ ಮಾಡಿಸಿರಬಾರದು. ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಕೇರಳದಿಂದ ಕೂಲಿ ಕೊಟ್ಟು ಗಲಾಟೆ ಮಾಡುವವರನ್ನು ಕರೆಯಿಸಿದ್ದರು. ಈಗ ಇದನ್ನೂ ಅವರೇ ಮಾಡಿರಬಹುದು ಎಂದು ತಿರುಗೇಟು ನೀಡಿದರು.

Advertisement

ಸಿಎಎ ವಿಚಾರದಲ್ಲಿ ವಿರೋಧ ಪಕ್ಷದವರು ಪಾಕಿಸ್ಥಾನದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಅಷ್ಟು ವಿಶ್ವಾಸ ಇದ್ದರೆ ಭಯೋತ್ಪಾಧಕರು ಮುಸ್ಲಿಮರಲ್ಲ ಎಂದು ಹೇಳಲಿ ಎಂದರು.

ಬಾಂಬ್ ಪ್ರಕರಣದ ಆರೋಪಿ ಆರೆಸ್ಸೆಸ್ಸ್ ಮುಖಂಡರ ಜತೆ ಪೊಟೊ ತೆಗೆಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಯೋತ್ಪಾಧಕರು, ನಕ್ಸಲರು ಇದನ್ನೇ ಮಾಡುವುದು. ಯಾವಾಗ ಯಾರ ಜತೆ ಯಾವ ವೇಷ ಧರಿಸಿ ಕಾಣಿಸಿಕೊಳ್ಳಬೇಕು. ಪೊಟೊ ತೆಗೆಸಿಕೊಳ್ಳಬೇಕು ಎಂದು ಆಲೋಚಿಸುತ್ತಾರೆ. ಬಿಜೆಪಿ, ಕಾಂಗ್ರೆಸ್ ಶಾಸಕರ ಜತೆಗೂ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ನಾರಾಯಣಸ್ವಾಮಿ ಹೇಳಿದರು.

 ಅಖಂಡ ಭಾರತ ಬಿಜೆಪಿ ಕನಸು:

ಫ್ರೀ ಕಾಶ್ಮೀರ್ ಮಾಡಿ ಮತ್ತೊಂದು ಪಾಕಿಸ್ಥಾನ ಮಾಡಬೇಕು ಎಂದು ಈ ದೇಶದ ಪ್ರಜ್ಞಾವಂತರು ಕೇಳಿದ್ದಾರಾ ಅಥವಾ ಕಾಂಗ್ರೆಸ್ಸಿನವರೇ ತೀರ್ಮಾನಿಸಿದ್ದಾರಾ. ಫ್ರೀ ಕಾಶ್ಮೀರ ಎಂದರೆ ಏನರ್ಥ ಎಂದು ಸಂಸದರು ಗಂಭಿರವಾಗಿ ಪ್ರಶ್ನಿಸಿದರು.

ಈ ದೇಶದ ಒಂದಿಂಚು ನೆಲವನ್ನೂ ಬೇರೆಯವರಿಗೆ ಕೊಡುವುದಿಲ್ಲ. ಇದೇ ಬಿಜೆಪಿ ಅಜೆಂಡಾ. ನಾನೊಬ್ಬ ಸಂಸದನಾಗಿ ಹೇಳುತ್ತಿದ್ದೇನೆ. ಬೇಕಾದರೆ ಪಾಕಿಸ್ಥಾನ, ಬಾಂಗ್ಲಾ ದೇಶಗಳನ್ನು ಸೇರಿಸಿಕೊಂಡು ಅಖಂಡ ಭಾರತ ಮಾಡುವ ಕಡೆಗೆ ಆಲೋಚನೆ ಮಾಡುತ್ತೇವೆ. ಇದೇ ದೇಶಭಕ್ತನ ಕನಸು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next