ಚಿತ್ರದುರ್ಗ: ಬಯಲು ಸೀಮೆಗೆ ನೀರು ತರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕಳೆದ 13 ವರ್ಷಗಳಿಂದ ನಡೆಯುತ್ತಿದೆ. ಇಷ್ಟು ವರ್ಷದಲ್ಲಿ ಆಗಿರುವ ಪ್ರಗತಿ ಕೇವಲ ಶೇ.40ರಷ್ಟು ಮಾತ್ರ ಎಂದು ಸಂಸದ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗದಿದ್ದರೆ ಭದ್ರಾ ಕೆಲಸದಿಂದ ಹೊರಗೆ ಹೋಗಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭದ್ರಾ ಮೇಲ್ದಂಡೆ ರಾಷ್ಟ್ರೀಯ ನೀರಾವರಿ ಯೋಜನೆಯಾಗಲಿದ್ದು, ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡುವ ಅಗತ್ಯವಿದೆ. ರಾಜ್ಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಯ ಯೋಜನಾ ವೆಚ್ಚವನ್ನು ಸರ್ಕಾರ 21 ಸಾವಿರ ಕೋಟಿ ರೂ.ಗೆ ಹೆಚ್ಚಿಸಿದೆ. ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಣೆಯಾಗುವ ಸಾಧ್ಯತೆ ಇದೆ. ಇದಕ್ಕೆ ಅನುಗುಣವಾದ ಪ್ರಗತಿ ಕಾಣಬೇಕಿದೆ. ಭೂಸ್ವಾ ಧೀನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಯೋಜನೆಯ ಹಿನ್ನಡೆಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಜೂನ್ ಅಂತ್ಯಕ್ಕೆ ತುಂಗಾ ನೀರು ಭದ್ರೆಗೆ: ಭದ್ರಾ ಮೇಲ್ದಂಡೆ ಯೋಜನೆಯ ಪ್ರಮುಖ ಘಟ್ಟವಾಗಿರುವ 1ನೇ ಹಂತದ ಕಾಮಗಾರಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದೆ. ತುಂಗಾ ಜಲಾಶಯದ ಮುತ್ತಿನಕೊಪ್ಪದಿಂದ ಹೊಸದುರ್ಗ ತಾಲೂಕಿನವರೆಗೆ ಸುಮಾರು 90 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಭೂಸ್ವಾ ಧೀನ ಸಮಸ್ಯೆಯಿಂದ ಅಲ್ಲಲ್ಲಿ ತೊಡಕಾಗಿದೆ. ಅರಣ್ಯ ಇಲಾಖೆಯ ಅನುಮತಿ ಹಾಗೂ ನಾಲೆಯಲ್ಲಾದ ಬದಲಾವಣೆಯಿಂದ ವಿಳಂಬವಾಗಿದೆ. ಜೂನ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಮುಖ್ಯ ಎಂಜಿನಿಯರ್ ರಾಘವನ್ ಭರವಸೆ ನೀಡಿದರು.
ಭೂಸ್ವಾಧೀನ ಅಧಿಕಾರಿಗೆ ಎಚ್ಚರಿಕೆ: ತರೀಕೆರೆ, ಕಡೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ಭೂಸ್ವಾ ಧೀನ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ನಾಲೆಯ 90 ಕಿ.ಮೀ ನಿಂದ 130 ಕಿ.ಮೀ ವ್ಯಾಪ್ತಿಯಲ್ಲಿ 780 ಎಕರೆ ಭೂಸ್ವಾ ಧೀನ ಪ್ರಕ್ರಿಯೆ ಬಾಕಿ ಉಳಿದಿರುವುದಕ್ಕೆ ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಈ ಕೆಲಸ ಮೊದಲು ಆಗಬೇಕು. ನಾನೇ ಕುಳಿತು ಮಾಡಿಸುತ್ತೇನೆ. ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದು ಭೂಸ್ವಾ ಧೀನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತುಮಕೂರು ಶಾಖಾ ಕಾಲುವೆ ಕಾಮಗಾರಿ ವಿಳಂಬವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಸ್ವಾ ಧೀನ ತಡವಾಗುತ್ತಿದೆ. ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸ್ಪಂದಿಸುತ್ತಿಲ್ಲ. ಇದರಿಂದ ವಿ.ವಿ ಸಾಗರಕ್ಕೆ ನಾಲೆ ಮೂಲಕ ನೀರು ತರಲು ಸಾಧ್ಯವಾಗುತ್ತಿಲ್ಲ ಎಂದು ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸ್ಫೋಟಕ್ಕೆ ಸರ್ಕಾರದ ಅನುಮತಿ ಪಡೆಯಿರಿ: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲುಗಣಿ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಿಂದ ಎಚ್ಚೆತ್ತ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿ ಸಿದೆ. ಸುಮಾರು ಮೂರು ಕಿ.ಮೀ ಕಾಮಗಾರಿಗೆ ಇದರಿಂದ ತೊಂದರೆ ಉಂಟಾಗಿದೆ. ಯಂತ್ರ ಬಳಸಿ ಸುರಂಗ ನಿರ್ಮಿಸಲು ಹೆಚ್ಚು ಸಮಯ ಹಿಡಿಯುತ್ತದೆ. ಸ್ಫೋಟಕ್ಕೆ ಅವಕಾಶ ಕಲ್ಪಿಸಿದರೆ ಅನುಕೂಲ ಎಂದು ಅಧಿಕಾರಿಗಳು ಗಮನ ಸೆಳೆದರು. ಪ್ರತಿಕ್ರಿಯಿಸಿದ ಸಂಸದರು, ನೀರಾವರಿ ಯೋಜನೆಯ ಉದ್ದೇಶಕ್ಕೆ ನಿರ್ಮಿಸುವ ನಾಲೆಯ ಕಾಮಗಾರಿಗೆ ಪೂರಕವಾಗಿ ನಡೆಸುವ . ಸ್ಫೋಟಕ್ಕೆ ವಿಶೇಷ ಅನುಮತಿ ಪಡೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ಭೂಸ್ವಾ ಧೀನ ಅಧಿಕಾರಿ ರೇಣುಕಾಪ್ರಸಾದ್, ಅಧೀಕ್ಷಕ ಎಂಜಿನಿಯರ್‌ಗಳಾದ ಶಿವಪ್ರಕಾಶ್, ಎಂ.ಎಚ್.ಲಮಾಣಿ ಮತ್ತಿತರರಿದ್ದರು.