ಬಂಟ್ವಾಳ: ದೇಶದಲ್ಲಿ ಎಲ್ಲರಿಗೂ ಅನಿಲ ಸೌಲಭ್ಯ ಸಿಗಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಕ್ಕೆ ತಂದಿರುವ “ಉಜ್ವಲ ಯೋಜನೆ’ಯ ಸವಲತ್ತು ನಾಡಿನ ಎಲ್ಲರಿಗೂ ದೊರಕು ವಂತಾಗಬೇಕು. ಇದುವರೆಗೆ ನೋಂದಣಿ ಮಾಡಿಕೊಳ್ಳದವರು ಕೂಡಾ ಹೆಸರು ದಾಖಲಿಸಿಕೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಕರೆ ನೀಡಿದ್ದಾರೆ.
ಅವರು ಜು. 21ರಂದು ಬಡಗಬೆಳ್ಳೂರು ಗ್ರಾಮ ಆದಿಶಕ್ತಿ ದೇವಸ್ಥಾನದ ಬಳಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಉಜ್ವಲ ಯೋಜನೆಯಂತೆ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ, ಅಂದರೆ 2011ರ ಅನಂತರ ನೋಂದಾವಣೆಯಾದ ಬಿಪಿಎಲ್ ಕುಟುಂಬಗಳಿಗೆ ಉಚಿತ ಅನಿಲ ಸೌಲಭ್ಯ ದೊರೆಯುತ್ತದೆ. ಸರಕಾರ ನೀಡುವ ಸೌಲಭ್ಯ ಬಳಸಿಕೊಳ್ಳುವ ಮೂಲಕ ಅದರ ಸದುಪಯೋಗ ಆಗಬೇಕು ಎಂದರು.
ಇಂದು ವಿಶ್ವವು ಭಾರತದ ಕಡೆ ನಿಬ್ಬೆರಗಾಗಿ ನೋಡುತ್ತಿದೆ. ಅದಕ್ಕೆ ಮೂಲ ಕಾರಣ ಪ್ರಧಾನಿ ನರೇಂದ್ರ ಮೋದಿಯವರು. ಅವರು ಸಮಾಜದ ಎಲ್ಲ ವರ್ಗದ ಜನರನ್ನು ತಲುಪುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದಾರೆ ಎಂದು ನಳಿನ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಜನರ ಭಾವನೆಗಳಿಗೆ ಬೆಲೆ ನೀಡಿದೆ. ಮುಂದಿನ ಕೆಲವೇ ತಿಂಗಳಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆ ತರೋಣ ಎಂದರು.
ವೇದಿಕೆಯಲ್ಲಿ ಮುಖಂಡರಾದ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ , ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ತಾ. ಪಂ. ಸದಸ್ಯ ಯಶವಂತ ಪೊಳಲಿ, ಕ್ಷೇತ್ರ ಪ್ರ. ಕಾರ್ಯದರ್ಶಿ ದೇವಪ್ಪ ಪೂಜಾರಿ, ಮೋನಪ್ಪ ದೇವಸ್ಯ, ರಾಮ್‌ದಾಸ್ ಬಂಟ್ವಾಳ, ಕರಿಯಂಗಳ ಗಾ.ಪಂ. ಅಧ್ಯಕ್ಷೆ ಚಂದ್ರಾವತಿ ಉಪಸ್ಥಿತರಿದ್ದರು. ಪ್ರಕಾಶ್ ಸ್ವಾಗತಿಸಿ , ಶಶಿಕಿರಣ್ ವಂದಿಸಿದರು.