ಮುಂಬಯಿ: ಬೊರಿವಲಿಯ ಎಂಎಚ್‌ಬಿ ಕಾಲನಿಯಲ್ಲಿರುವ ಶ್ರೀ ದತ್ತಮಂದಿರವನ್ನು ಧರೆಗುರು ಳಿಸಲು ಬಂದ ಬೊರಿವಲಿ ನಗರ ಪಾಲಿಕೆಯ ಅಧಿಕಾರಿಗಳನ್ನು ತಡೆದು ಸಂಸದ ಗೋಪಾಲ್ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶ್ರೀ ದತ್ತಮಂದಿರವು ಅನಧಿಕೃತ ವಾಗಿರುವುದರಿಂದ ಅದನ್ನು ಧರೆಗುರುಳಿಸಲಾಗುವುದೆಂದು ತಿಳಿಸಿ, ಬುಧವಾರ ಬೆಳ್ಳಂಬೆಳಗ್ಗೆ ಪಾಲಿಕೆಯ ಅಧಿಕಾರಿಗಳು ಜೆಸಿಬಿಯೊಂದಿಗೆ ಬಂದು ಮಂದಿರವನ್ನು ಕೆಡವಲು ಮುಂದಾಗಿದ್ದರು. ಸುದ್ದಿ ತಿಳಿದು ತತ್‌ಕ್ಷಣ ಘಟನಾ ಸ್ಥಳಕ್ಕಾಗಮಿಸಿದ ತುಳು-ಕನ್ನಡಿಗ ಗೋಪಾಲ್ ಶೆಟ್ಟಿ ಅವರು ಜೆಸಿಬಿಯ ಮುಂದೆ ನಿಂತು ಮಂದಿರವನ್ನು ಕೆಡವುದಕ್ಕಿಂತ ಮುಂಚೆ ತನ್ನನ್ನು ಕೆಡವಿ ಹಾಕುವಂತೆ ಜೆಸಿಬಿ ಚಾಲಕನಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿ ಪ್ರತಿಭಟನೆ ನಡೆಸಿದರು.
ದತ್ತಮಂದಿರವು ಧಾರ್ಮಿಕ ಸ್ಥಳವಾಗಿ ರಾರಾಜಿಸುತ್ತಿದೆ. ಅಲ್ಲದೆ ಮಂದಿರವು ಕಂಪೌಂಡ್‌ನ ಒಳಗಿದ್ದು, ಯಾವುದೇ ರೋಡ್ ಅಥವಾ ಫುಟ್‌ಪಾತ್ ಮೇಲಿಲ್ಲ. ಮಂದಿರ ನಿರ್ಮಾಣದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುತ್ತಿಲ್ಲ. ಇದ್ದಕ್ಕಿದ್ದ ಹಾಗೆ ಇದು ಹೇಗೆ ಅಕ್ರಮವಾಗುತ್ತದೆ ಎಂದು ಸಂಸದ ಗೋಪಾಲ್ ಶೆಟ್ಟಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿನೋದ್ ಗೋನ್ಸಾಲ್ಕರ್, ನಗರ ಸೇವಕ ಶಿವಾನಂದ ಶೆಟ್ಟಿ, ಸ್ಥಳೀಯ ನಗರ ಸೇವಕಿ ಅಂಜಲಿ ಕೇಡೆಕರ್, ಉದ್ಯಮಿ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ, ಆಹಾರ್‌ನ ಮಾಜಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಹೊಟೇಲ್ ಉದ್ಯಮಿ
ರವೀಂದ್ರ ಶೆಟ್ಟಿ ಹಾಗೂದತ್ತಮಂದಿರದ ನೂರಾರು ಭಕ್ತಾದಿ ಗಳು, ಗೋಪಾಲ್ ಶೆಟ್ಟಿ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಜನದಟ್ಟಣೆಯನ್ನು ಕಂಡು ಪಾಲಿಕೆಯ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.