ಮುಂಬಯಿ: ಸರಕು ಸೇವಾತೆರಿಗೆ ಜಿಎಸ್‌ಟಿ ಕೌನ್ಸಿಲ್ ಇತ್ತೀಚೆಗೆ ಗುವಾಹಟಿಯಲ್ಲಿ ನಡೆಸಿದ ಸಭೆಯಲ್ಲಿ ಎಸಿ ಮತ್ತು ಎಸಿಯೇತರ ಎಲ್ಲಾ ಹೊಟೇಲ್ ರೆಸ್ಟೋರೆಂಟ್‌ಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ. 18 ರಿಂದ ಶೇ. 5ಕ್ಕೆ ಇಳಿಸಲಾಗಿದ್ದು, ಈ ವಿಷಯದ ಹೊಟೇಲಿಗರ ಹೋರಾಟಕ್ಕೆ ಬೆಂಬಲವಾಗಿ ನಿಂತು ಸಹಕರಿಸಿದ ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಆಹಾರ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಆಹಾರ್‌ನ ಅಧ್ಯಕ್ಷ ಆದರ್ಶ್ ಶೆಟ್ಟಿ,ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿ ವಿಶ್ವಪಾಲ್ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಎರ್ಮಾಳ್ ಹರೀಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಉದ್ಯಮಿ ಮುಂಡಪ್ಪ ಪಯ್ಯಡೆ ಮತ್ತು ಆಹಾರ್ ಪೊಲೀಸ್ ಸಮಿತಿಯ ಕಾರ್ಯಾಧ್ಯಕ್ಷ ಡಾ| ಸತೀಶ್ ಶೆಟ್ಟಿ ಅವರು ಸಂಸದ ಗೋಪಾಲ್ ಶೆಟ್ಟಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಪುಷ್ಪಗುತ್ಛವನ್ನಿತ್ತು ಕೃತಜ್ಞತೆ ಸಲ್ಲಿಸಿದರು.
ಶೇ. 18ರಷ್ಟು ಜಿಎಸ್‌ಟಿ ತೆರಿಗೆ ಹೇರಿಕೆಯಿಂದ ಹೊಟೇಲ್ ರೆಸ್ಟೋರೆಂಟ್‌ಗಳ ಮೇಲೆ ಭಾರೀ ಹೊರೆ ಬಿದ್ದಿತ್ತು. ಈ ತೆರಿಗೆಯನ್ನು ಶೇ. 5ಕ್ಕೆ ಇಳಿಸುವಂತೆ ಕಳೆದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಆಹಾರ್‌ನ ನಿಯೋಗ ಸಂಸದ ಗೋಪಾಲ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ದಿಲ್ಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿÉ ಅವರನ್ನು ಭೇಟಿಗೈದು ಮನವಿ ಸಲ್ಲಿಸಿತ್ತು.
ಶೇ. 18 ರಷ್ಟು ಜಿಎಸ್‌ಟಿ ತೆರಿಗೆ ಹೇರಿಕೆಯಿಂದ ಹೊಟೇಲ್ ಉದ್ಯಮವನ್ನು ನಡೆಸುವವರಿಗೆ ತುಂಬಾ ತೊಂದರೆಯಾಗುತ್ತಿರುವ ಬಗ್ಗೆ ಗೋಪಾಲ್ ಶೆಟ್ಟಿ ಅವರು ಹಣಕಾಸು ಸಚಿವರಿಗೆ ಮನವರಿಕೆ ಮಾಡಿದ್ದರು. ಈ ಸಂದರ್ಭ ಜೇಟ್ಲಿ ಅವರು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಖಂಡಿತವಾಗಿಯೂ ವಿಷಯ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದರು. ಗುವಾಹಟಿಯಲ್ಲಿ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ಎಸಿ ಮತ್ತು ಎಸಿಯೇತರ ರೆಸ್ಟೋರೆಂಟ್‌ಗಳಿಗಾಗಿ ಶೇ. 5 ರಷ್ಟು ಸಮಾನ ತೆರಿಗೆ ಗೊತ್ತುಪಡಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಹೊಟೇಲಿ
ಗರು ನಿಟ್ಟುಸಿರು ಬಿಟ್ಟಿದ್ದು, ಈ ವಿಷಯದಲ್ಲಿ ಆಹಾರ್‌ನ ಆತಂಕಕ್ಕೆ ಸಂಸದ ಗೋಪಾಲ್ ಶೆಟ್ಟಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಆಹಾರ್ ಮತ್ತು ಸಂಸದ ಗೋಪಾಲ್ ಶೆಟ್ಟಿ ಅವರ ಮಧ್ಯೆ ನಿರಂತರ ಸಂಪರ್ಕವಿರುವಂತೆ ನೋಡಿಕೊಂಡು ಗೋಪಾಲ್ ಶೆಟ್ಟಿ ಅವರ ಮೂಲಕ ದಿಲ್ಲಿ ಮಟ್ಟದಲ್ಲಿ ಹೊಟೇಲ್ ಉದ್ಯಮದ ಮೇಲಿನ ಜಿಎಸ್‌ಟಿ ತೆರಿಗೆ ಹೊರೆಯನ್ನು ಕಡಿಮೆ ಮಾಡಿಸುವ ವಿಷಯದಲ್ಲಿ ನಿರಂತರ ಸಹಕಾರ ಬೆಂಬಲ ನೀಡಿದ ಹೊಟೇಲ್ ಉದ್ಯಮಿ ಎರ್ಮಾಳ್ ಹರೀಶ್ ಅವರಿಗೂ ಆಹಾರ್ ಕೃತಜ್ಞತೆ ಸಲ್ಲಿಸಿದೆ.