Advertisement

ಸಿಕ್ಕ ಅವಕಾಶದಲ್ಲಿ ಎಚ್ಡಿಕೆ ಏನೂ ಮಾಡ್ಲಿಲ್ಲ: ಡಿ.ಕೆ.ಸುರೇಶ್‌

03:15 PM Apr 19, 2022 | Team Udayavani |

ರಾಮನಗರ: ಎಚ್‌.ಡಿ.ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಜಿಲ್ಲೆ ಯಲ್ಲಿ ನೀರಿನ ಸಮಸ್ಯೆ ನೀಗಿಸಲು ಯಾವ ನೀರಾವರಿ ಯೋಜನೆಯನ್ನು ಜಾರಿಗೆ ತರಲಿಲ್ಲ. ಸಿಕ್ಕಿದ್ದ ಅವಕಾಶವನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

Advertisement

ತಾಲೂಕಿನ ಕೂಟಗಲ್‌ ಹೋಬಳಿಯ ತಾಳವಾಡಿ ಗ್ರಾಮದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ ಯಾದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಮಂಚನಬೆಲೆ ಮತ್ತು ವೈ.ಜಿ.ಗುಡ್ಡ ಜಲಾಶಯ ಈ ಭಾಗದ ರೈತರಿಗೆ ಜೀವ ನಾಡಿ ಆಗಬಹುದಾಗಿತ್ತು. ಆದರೆ ಅದ್ಯಾವುದನ್ನು ಅವರು ಮಾಡಲಿಲ್ಲ. ಈಗ ಜನತಾ ಜಲಧಾರೆ ಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜನತಾ ಜಲಧಾರೆ ಯಾತ್ರೆಗೆ ತಮ್ಮ ಸ್ವಾಗತವಿದೆ. ಆದರೆ ಸುಳ್ಳಿನಿಂದಲೇ ಮನೆಕಟ್ಟಲು ಸಾಧ್ಯವಿಲ್ಲ. ಜನ ಇಂತವುಗಳನ್ನು ನಂಬುವುದಿಲ್ಲ ಎಂದರು.

ಎಚ್‌.ಡಿ. ಕುಮಾರಸ್ವಾಮಿಯವರ ಬಗೆಗಿನ ನಿರೀಕ್ಷೆಗಳು ಹುಸಿಯಾಗಿವೆ ಎಂದು ಛೇಡಿಸಿದರು.

Advertisement

ಸತ್ತೆಗಾಲ ಎಲ್ಲಿದೆ ಎಂದೇ ಅವರಿಗೆ ಗೊತ್ತೆ?: ಸತ್ತೆ ಗಾಲ ಯೋಜನೆಯನ್ನು ತಮ್ಮ ಯೋಜನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಸತ್ತೆಗಾಲ ಎಲ್ಲಿದೆ ಎಂಬುದೇ ಗೊತ್ತಿಲ್ಲ ಎಂದು ಪರೋಕ್ಷವಾಗಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ವೇಳೆ ಕಾಂಗ್ರೆಸ್‌ ಸರ್ಕಾರದಲ್ಲಿ ಡಿಪಿಆರ್‌ ಸಿದ್ಧವಾಗಿ ಅನುಮೋದನೆ ಸಿಕ್ಕಿದೆ. ತಾವು ಈ ನೀರಾವರಿ ಯೋಜನೆಗಾಗಿ ಪಟ್ಟ ಶ್ರಮ, ಎಷ್ಟು ಇಲಾಖೆ ಸುತ್ತಾಡಿದ್ದೇನೆ ಎನ್ನು ವುದೆಲ್ಲ ಕಡತಗಳಲ್ಲಿವೆ. ಅನುಮಾನ ಇದ್ದವರು ಒಮ್ಮೆ ಆ ಕಡತಗಳನ್ನು ಪರಿಶೀಲಿಸಬಹುದು ಎಂದರು.

ಸತ್ತೆಗಾಲದಿಂದ ಪೈಪ್‌ಲೈನ್‌ ಮೂಲಕ ಇಗ್ಗಲೂರು ಜಲಾಶಯಕ್ಕೆ ನೀರು ಹರಿಸುವುದು. ಅಲ್ಲಿಂದ ಕಣ್ವ ಜಲಾಶಯ ತುಂಬಿ, ನಂತರ ಏತ ನೀರಾವರಿ ಮೂಲಕ ಕೂಟಗಲ್‌ ಹೋಬಳಿಯ ಕೆರೆಗಳನ್ನು ತುಂಬಿಸುವುದು ಸತ್ತೆಗಾಲ ಯೋಜನೆಯ ಉದ್ದೇಶ. ಕಣ್ವದಿಂದಲೇ ಮಂಚನಬೆಲೆ ಮತ್ತು ವೈ.ಜಿ.ಗುಡ್ಡ ಜಲಾಶಯ ತುಂಬಿಸಿ ಅಲ್ಲಿಂದ ಅರ್ಕಾವತಿ ನದಿಯಲ್ಲಿ ನೀರು ಹರಿಸುವುದು ಯೋಜನೆಯ ಮತ್ತೂಂದು ಉದ್ದೇಶ. ವರ್ಷಪೂರ್ತಿ ನೀರು ಹರಿದಾಗ ಅಂತರ್ಜಲ ವೃದ್ಧಿ ಯಾಗುತ್ತದೆ. ಈ ಮಹತ್ವಾಕಾಂಕ್ಷೆ ಯೋಜನೆಯಿಂದ ಚನ್ನಪಟ್ಟಣ, ರಾಮನಗರ ಮತ್ತು ಮಾಗಡಿ ತಾಲೂಕಿನ ರೈತರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂದು ಸತ್ತೆ ಗಾಲ ಯೋಜನೆಯ ವಿವರಣೆ ನೀಡಿದರು.

ಕೊಳಚೆ ನೀರೆಂದು ಅರಿವಾಗಲಿಲ್ಲವೇ?: ಭೈರಮಂ ಗಲ ಜಲಾಶಯದ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಅವರು (ಕುಮಾರಸ್ವಾಮಿ) ವಿರೋಧಿಸಿದ್ದರು. ಇತ್ತೀಚೆಗೆ ಹುಚ್ಚ ಮ್ಮನದೊಡ್ಡಿ ಏತ ನೀರಾವರಿ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಆಗ ಅದು ಕೊಳಚೆ ನೀರು ಎನ್ನುವುದು ಅವರ ಗಮನಕ್ಕೆ ಬರಲಿಲ್ಲವೇ? ಅಷ್ಟಕ್ಕೂ ಹುಚ್ಚಮ್ಮ ನದೊಡ್ಡಿ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದವರು ಯಾರು? ಎಲ್ಲವನ್ನೂ ಸುಳ್ಳಿನಿಂದಲೇ ಸಾಧಿಸಲಾಗುವುದೇ? ಎಂದು ಪ್ರಸ್ನಿಸಿದರು.

ಕಾಂಗ್ರೆಸ್‌ ಪಕ್ಷದ ಬಗ್ಗೆ ಜನತೆಗೆ ವಿಶ್ವಾಸ: ಜಿಲ್ಲೆಯ ಜನತೆ ಎಲ್ಲಾ ಪಕ್ಷಗಳ ಯೋಗ್ಯತೆಯನ್ನು ನೋಡಿದ್ದಾರೆ. ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುವ ಕಾಂಗ್ರೆಸ್‌ ಪಕ್ಷದ ಬಗ್ಗೆ ಅವರಲ್ಲಿ ವಿಶ್ವಾಸ ಮರುಕಳಿಸಿದೆ. ಜಿಲ್ಲೆಯಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಜನರ ವಿಶ್ವಾಸ, ನಂಬಿಕೆಗೆ ಕಾಂಗ್ರೆಸ್‌ ಎಂದಿಗೂ ಚ್ಯುತಿ ಬಾರದಂತೆ ಕೆಲಸ ಮಾಡಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಅಭಿವೃದ್ಧಿ ಆರಂಭವಾಗಲಿದೆ. ಪ್ರತಿ ಹೋಬಳಿಯಲ್ಲಿ ಒಂದೊಂದು ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಭಾಗದ ಯುವ ಸಮೂಹ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವುದು ಇದರ ಉದ್ದೇಶ ಎಂದರು.

ಬಡವರ ಬದುಕು ಸಂಕಷ್ಟದಲ್ಲಿ : ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಯ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಡಿ.ಕೆ.ಸುರೇಶ್‌, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು, ರೈತರು ಮತ್ತು ಕೂಲಿ ಕಾರ್ಮಿಕರ ಬದುಕು ಇನ್ನಷ್ಟು ಕಷ್ಟವಾಗಿದೆ. ಸರ್ಕಾರಗಳು ಪ್ರಚಾರಕ್ಕಾಗಿ ವ್ಯಯ ಮಾಡುವ ಹಣದಿಂದ ಅನೇಕ ಬಡವರ ಮನೆಗಳನ್ನು ಉದ್ಧಾರ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next