ಉಡುಪಿ: ದೇಶದ ಸಾಂಪ್ರದಾಯಿಕ ಕಸುಬುದಾರರಿಗೆ ಅನುಕೂಲಕ್ಕಾಗಿ ತಂದ ವಿಶ್ವಕರ್ಮ ಯೋಜನೆಗೆ ಕರ್ನಾಟಕದಲ್ಲಿ 11 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಸಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಆಸಕ್ತ ಬಡವರು ಯೋಜನೆಗೆ ಅರ್ಜಿ ಹಾಕಿದ್ದಾರೆ.
ಈಗಾಗಲೇ 7 ಸಾವಿರಕ್ಕೂ ಅಧಿಕ ಫಲಾನುಭವಿಗಳು ತರಬೇತಿ ಪಡೆದಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ವಿಶ್ವಕರ್ಮ ಯೋಜನೆಯ ಕರಕುಶಲ ಕರ್ಮಿಗಳಿಗೆ ವಿಳಂಬವಿಲ್ಲದೆ ಸಾಲ ನೀಡಲು ನಿರ್ದೇಶನ ನೀಡುವಂತೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿ ಚರ್ಚಿಸಿದರು.
ವಿಶ್ವಕರ್ಮ ಯೋಜನೆಗೆ ಕೆಲ ರಾಷ್ಟ್ರೀಕೃತ ಬ್ಯಾಂಕ್ ಗಳು ಮಾತ್ರ ಉತ್ತಮವಾಗಿ ಸ್ಪಂದಿಸುತ್ತಿದ್ದು, ಇತರ ಕೆಲ ಬ್ಯಾಂಕಿನ ಬ್ರಾಂಚ್ ಗಳಲ್ಲಿ ನಿಗದಿತ 250 ರೂ.ಗಿಂತ ಹೆಚ್ಚು ಮೊತ್ತದ ಅಫಿಡವಿತ್ ಕೇಳುವುದು, ಕೋವಿಡ್ ಸಂಕಷ್ಟ ಕಾಲದಲ್ಲಿ ತೆಗೆದು ಸಾಲ ಪಾವತಿ ಮಾಡಿದ್ದರೂ ಸಿಬಲ್ ಉಲ್ಲೇಖ ಮಾಡಿ ಸಾಲ ನಿರಾಕರಿಸುವುದು, ಕೆಲವೆಡೆ ಜಿ.ಎಸ್.ಟಿ. ಬಿಲ್ಲುಗಳನ್ನು ಕೇಳುತ್ತಾ ಇರುವುದರಿಂದ ವಿಶ್ವಕರ್ಮ ಕುಲ ಕಸುಬುದಾರರು ಸಾಲಕ್ಕಾಗಿ ಕಾಯುತ್ತಿದ್ದಾರೆ.
ಈ ಹಿನ್ನೆಲೆ ಬ್ಯಾಂಕ್ ಗಳಿಗೆ ವಿಳಂಬವಿಲ್ಲದೆ ಕೇಂದ್ರ ಸರಕಾರದ ಭದ್ರತೆ ಹೊಂದಿರುವ ವಿಶ್ವಕರ್ಮ ಯೋಜನೆಯ ಅರ್ಜಿದಾರರಿಗೆ ಸಾಲ ನೀಡುವಂತೆ ನಿರ್ದೇಶನ ನೀಡಬೇಕೆಂದು ಸಂಸದ ಕೋಟ ಮನವಿ ಮಾಡಿದರು.
ಮನವಿಯನ್ನು ಆಲಿಸಿದ ಕೇಂದ್ರ ಹಣಕಾಸು ಸಚಿವೆ ತಕ್ಷಣ ಕ್ರಮ ಜರುಗಿಸಿ ಸಾಲ ಸೌಲಭ್ಯ ನೀಡಲು ಆದೇಶಿಸುವುದಾಗಿ ತಿಳಿಸಿದ್ದಾರೆ.