Advertisement
ಇದಕ್ಕೂ ಮೊದಲು ಆಂಧ್ರಪ್ರದೇಶದ ತಿರುಪತಿ ಶ್ರೀ ವೆಂಕಟೇಶ್ವರಸ್ವಾಮಿ ದರ್ಶನ ಪಡೆದ ಶಿವರಾಜ್‌ಸಿಂಗ್ ಚೌವ್ಹಾಣ್ ಕುಟುಂಬ ನೇರವಾಗಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದರು. ನಂತರ ಕಾರಿನ ಮೂಲಕ ಮಧ್ಯಾಹ್ನ 3 ಗಂಟೆಗೆ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ವಿದ್ವಾನ್ ರಾಮಪ್ರಿಯ ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ರಾಮಪ್ರಿಯ ಬೆಳ್ಳಿರಥ ಸಮರ್ಪಿಸಲು ಕೋರಿ ಮನವಿ ಅರ್ಪಿಸಿದರು. ಇದಕ್ಕೆ ಸ್ಪಂದಿಸಿದ ಅವರು, ಚೆಲುವನಾರಾಯಣಸ್ವಾಮಿಯ ದರ್ಶನ ಭಾಗ್ಯದಿಂದ ನನಗೆ ಅಧಿಕಾರ ಲಭಿಸಿದೆ. ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮತ್ತು ಸ್ಥಾನೀಕರು, ರಾಮಾನುಜರ ಸನ್ನಿಧಿಯ ಅರ್ಚಕರ ಆಶಯದಂತೆ ಸ್ವಾಮಿಗೆ ಸಮರಭೂಪಾಲ ಬೆಳ್ಳಿಯ ರಥ ಮಾಡಿಸಿ ನಾನೇ ಖುದ್ದಾಗಿ ಅರ್ಪಿಸುತ್ತೇನೆ ಎಂದು ವಾಗ್ದಾನ ಮಾಡಿದರು. ಅಧಿಕಾರ ಬಲದಿಂದಾಗಿ ಬಡವರಿಗೆ ಮತ್ತು ನೊಂದವರಿಗೆ ಸಹಾಯ ಮಾಡಲು ಭಗವಂತ ಮತ್ತಷ್ಟು ಶಕ್ತಿ ನೀಡಿದ್ದಾನೆ ಎಂದರು. ನಂತರ ಬೆಟ್ಟಹತ್ತಿದ ಶಿವರಾಜ್ ಸಿಂಗ್ ಯೋಗಾನರಸಿಂಹಸ್ವಾಮಿಯ ದರ್ಶನ ಪಡೆದರು.
Related Articles
ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡು ವಿರೋಧ ಪಕ್ಷದ ನಾಯಕರಾಗಿದ್ದ ಶಿವರಾಜ್‌ಸಿಂಗ್ ಚೌವ್ಹಾಣ್ ಮೇಲುಕೋಟೆಗೆ ಪ್ರಥಮ ಭಾರಿಗೆ ಭೇಟಿ ನೀಡಿ ಅಧಿಕಾರಕ್ಕಾಗಿ ಪ್ರಾರ್ಥಿಸಿದ್ದರು. ದೈವಕೃಪೆಯಿಂದ ಅಧಿಕಾರ ಲಭಿಸಿದ ತಕ್ಷಣ ಮತ್ತೆ ಆಗಮಿಸಿ ದೇವರ ದರ್ಶನ ಪಡೆದಿದ್ದರು. ಇದೀಗ ನಡೆದ ಉಪಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಮತ್ತಷ್ಟು ಭದ್ರವಾಗುತ್ತಿದ್ದಂತೆ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಬೆಳ್ಳಿಯ ರಥ ನೀಡುವ ಸಂಕಲ್ಪ ಮಾಡಿದ್ದಾರೆ.
Advertisement
ಎಲ್ಲರೂ ಆತ್ಮನಿರ್ಭರ ಸಂಕಲ್ಪ ಮಾಡಬೇಕು:ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಜನರಿಗೂ ದೀಪಾವಳಿ ಶುಭಾಶಯ ತಿಳಿಸಿದರು. ನಾನು ಮೇಲುಕೋಟೆ ದೇವರ ದರ್ಶನ ಪಡೆದಿದ್ದೇನೆ. ದೇಶ ಮತ್ತು ಮಧ್ಯಪ್ರದೇಶದ ಜನರಿಗೆ ಒಳಿತಾಗುವಂತೆ ಪ್ರಾರ್ಥನೆ ಮಾಡಿದ್ದೇನೆ. ನಮ್ಮ ದೇಶದ ಪ್ರಧಾನಮಂತ್ರಿ ಆತ್ಮನಿರ್ಭರ ಸಂಕಲ್ಪ ಮಾಡಿದ್ದಾರೆ. ಆ ಸಂಕಲ್ಪ ಮಾಡಲು ಎಲ್ಲ ಪ್ರದೇಶಗಳಲ್ಲಿ ಆತ್ಮ ನಿರ್ಭರ ಮಾಡಬೇಕಿದೆ. ಈ ಸಂಕಲ್ಪಕ್ಕಾಗಿ ಮಧ್ಯಪ್ರದೇಶದ ಜನರು ಕೂಡ ಕೈಜೋಡಿಸಿದ್ದಾರೆ ಎಂದರು. ಕೊರೊನಾ ಸೋಂಕು ತೊಲಗಿ ಜನರ ಹೃದಯದಲ್ಲಿ ಸಂತೋಷ ಬರುಬೇಕಿದೆ. ನಮ್ಮ ದೇಶ ಭಾರತ ಮತ್ತೊಮ್ಮೆ ವಿಶ್ವಗುರು ಆಗಬೇಕಿದೆ ಇದೇ ನನ್ನ ಪ್ರಾರ್ಥನೆ. ಇದಕ್ಕಾಗಿ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಬೇಡಿಕೊಂಡಿದ್ದೇನೆ. ನಾನು ಮುಖ್ಯಮಂತ್ರಿ ಆಗಲು ಈ ಮೇಲುಕೋಟೆ ಭಗವಂತ ಕಾರಣ. ಭಗವಂತನಾ ಆಜ್ಞೆ ಇಲ್ಲದೆ ಏನೂ ನಡೆಯಲ್ಲ. ಇದು ನಿಜವಾಗಿಯೂ ದೇವರ ಕೃಪೆ ಎಂದು ಹೇಳಿದರು. ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ, ಬಿಜೆಪಿ ಮುಖಂಡರಾದ ನಾಗಣ್ಣಗೌಡ, ಸೋಮಶೇಖರ್, ಪುರುಷೋತ್ತಮ್ ಇತರರು ಭಾಗವಹಿಸಿದ್ದರು.