ಭೋಪಾಲ್ : ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನು ಗುರುವಾರ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು.
ನರ್ಮದಾ ನದಿಯ ಸುಂದರವಾದ ದಡದ ಮಂಧಾತ ಪರ್ವತದ ಮೇಲಿರುವ ಓಂಕಾರೇಶ್ವರದಲ್ಲಿರುವ ಈ ಪ್ರತಿಮೆಯು ಪ್ರಮುಖ ಧಾರ್ಮಿಕ ತಾಣವಾಗಿ ಬದಲಾಗಿದೆ. ಸಿಎಂ ಸೇರಿ ಸಾವಿರಾರು ಮಂದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಭವ್ಯವಾದ ಪ್ರತಿಮೆಯನ್ನು ವೀಕ್ಷಿಸಲು ಇಂದೋರ್‌ನಿಂದ ಸರಿಸುಮಾರು 80 ಕಿಮೀ ದೂರ ಪ್ರಯಾಣ ಮಾಡಬೇಕಾಗುತ್ತದೆ
“ಆದಿ ಗುರು ಶಂಕರಾಚಾರ್ಯ ಮಹಾರಾಜರು ದೇಶವನ್ನು ಸಾಂಸ್ಕೃತಿಕವಾಗಿ ಸಂಪರ್ಕಿಸಲು ಶ್ರಮಿಸಿದರು. ಅವರು ವೇದಗಳ ಸಾರವನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಮಾಡಿದರು. ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನೂ ಮಾಡಿದರು. ಭಾರತವನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸಲು ಇದು ಕೆಲಸ ಮಾಡಿದೆ. ಆ ಕಾರಣದಿಂದ ಭಾರತ ಇಂದು ಒಗ್ಗಟ್ಟಾಗಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಪ್ರತಿಮೆ ಉದ್ಘಾಟನೆ ಜತೆಗೆ ಸಿಎಂ ಶಿವರಾಜ್ ಸಿಂಗ್ ಅವರು ಏಕಾತ್ಮ ವೃಕ್ಷಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಕೇರಳದಲ್ಲಿ ಜನಿಸಿದ ಆದಿ ಶಂಕರಾಚಾರ್ಯರು ಓಂಕಾರೇಶ್ವರದಲ್ಲಿ ಜ್ಞಾನವನ್ನು ಪಡೆದು ಕಾಡು ಮೇಡುಗಳ ಮೂಲಕ 1600 ಕಿಲೋಮೀಟರ್‌ಗಳಷ್ಟು ಪಾದಯಾತ್ರೆ ಕೈಗೊಂಡಿದ್ದರು. ನಂತರ, ಅವರು ಸುಜ್ಞಾನವನ್ನು ಪಡೆದುಕೊಂಡ ಬಳಿಕ ಕಾಶಿ (ಉತ್ತರ ಪ್ರದೇಶದ ವಾರಾಣಸಿ) ಕಡೆಗೆ ತೆರಳಿದ್ದರು.