ವಿಜಯಪುರ: ಈ ನೆಲದ ಕಾನೂನಿಗೆ ವಿರುದ್ಧವಾಗಿರುವ, ದೇಶ ವಿರೋಧಿ ಚಟುವಟಿಕೆ ನಡೆಸುವ ಯಾರನ್ನೂ, ಯಾವ ಸಂಘಟನೆಯನ್ನೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಧನ್ಯವಾದ ತಿಳಿಸಿದರು.
ಪಟ್ಟಣದ ಶ್ರೀ ಸೌಮ್ಯ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ತಮ್ಮ 80ನೇ ಹುಟ್ಟುಹಬ್ಬದ ಪ್ರಯುಕ್ತ ಪತ್ನಿ ಉಮಾ ಬಚ್ಚೇಗೌಡ ಸಮೇತ ಕುಟುಂಬ ಸಮೇತರಾಗಿ ಆಗಮಿಸಿ ಮನೆ ದೇವರಾದ ಶ್ರೀ ಸೌಮ್ಯ ಚನ್ನಕೇಶವ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳು ನೀಡಿದ ಅಭಿನಂದನೆ ಸ್ವೀಕರಿಸಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದರು. ಸಮಾಜ, ದೇಶಕ್ಕೆ ಕಂಟಕವಾಗಿದ್ದ ಪಿಎಫ್‌ಐ ಸಂಘಟನೆಯನ್ನು ಮೊದಲೇ ನಿಷೇಧಿಸಬೇಕಿತ್ತು. ತಡವಾಗಿಯಾದರೂ ಅಪಾಯಕಾರಿ ಸಂಘಟನೆ ಯನ್ನು ನಿಷೇಧಿಸಿರುವುದು ಶ್ಲಾಘನೀಯ. ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶಪ್ರೇಮಿ ಸಂಘವಾಗಿದ್ದು, ಸ್ವಾತಂತ್ರ್ಯ ಪೂರ್ವ ದಿಂದಲೂ ಸೇವಾ ಮನೋಭಾವ ಉಳ್ಳದ್ದು ಹಾಗೂ ದೇಶದ ಹಿತಕ್ಕಾಗಿ ದುಡಿಯುವ ಸಂಸ್ಥೆಯಾಗಿದೆ ಎಂದು ಹೇಳಿದರು.
ಪರಿಹಾರ ಅನರ್ಹರ ಪಾಲು: ಕಳೆದ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಹಲವಾರು ಕೆರೆ ಕಟ್ಟೆಗಳು ಒಡೆದಿದ್ದು, ಬ್ರಿಡ್ಜ್ಗಳು ನಾಶವಾಗಿ, ರಸ್ತೆಗಳು ಕೊಚ್ಚಿ ಹೋಗಿದ್ದು ಸರ್ಕಾರದ ಅಂದಾಜಿಗಿಂತ 2-3 ಪಟ್ಟು ಹೆಚ್ಚು ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದು, ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದೆ. ಆದರೆ ರೈತರಿಗಾಗಿ 422 ಕೋಟಿ ರೂ. ನೀಡಿದ ಪರಿಹಾರ ಕ್ರಮಬದ್ಧವಾಗಿಲ್ಲ ಹಾಗೂ ಅನರ್ಹರ ಪಾಲಾಗಿದ್ದು, ಪರಿಹಾರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು .
ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್ಟಿ ಬಾಕಿ 11 ಸಾವಿರ ಕೋಟಿ ರೂ. ಬಿಡುಗಡೆಯಾಗಬೇಕಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಳಾದ ಜಯರಾಂ ರಾಯಪುರ್, ಬೆಂಗ್ರಾ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ದೊಡತತಮಂಗಲ ನಾರಾಯಣಸ್ವಾಮಿ, ಪೂಜೆ ರಾಮನಹಳ್ಳಿ ಶ್ರೀನಿವಾಸ್, ಹೊಸಕೋಟೆ ರಾಜು, ದೇವನಹಳ್ಳಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಂಸದರ ಕಾರ್ಯದರ್ಶಿಗಳಾದ ಶೇಷಾಚಲ ಮೂರ್ತಿ, ದಾಸ್ ಉಪಸ್ಥಿತರಿದ್ದರು .
ಕೇಂದ್ರ ಸರ್ಕಾರ ದೇಶದ ಸುರಕ್ಷತೆಯ ದೃಷ್ಟಿಯಿಂದ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದ್ದು, ಅತ್ಯಂತ ಆನಂದದಾಯಕ ನಿರ್ಧಾರ. ಈ ತೀರ್ಮಾನವನ್ನು ನಾನು ಅಭಿನಂದಿಸುತ್ತೇನೆ.
– ಬಿ.ಎನ್.ಬಚ್ಚೇಗೌಡ, ಸಂಸದ